ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Friday, 1 March 2013

ತಾಯಿಯು ಮಕ್ಕಳ ನೆಮ್ಮದಿಯನ್ನೇ ಬಯಸುತ್ತಾಳೆ.ಆದರೆ ಮಕ್ಕಳು?..............


ನನ್ನ ಪ್ರೈಮರಿ ಶಾಲೆಯ ದಿನಗಳು ನೆನಪಾಗುತ್ತದೆ. ಆ ದಿನಗಳಲ್ಲಿ ನನ್ನನ್ನು ಆಕರ್ಶಿಸಿದ ಒಂದು ಪದ್ಯ
“ತಾಯಿ ದೇವರೆಂದು ವೇದ ಬಾಯಿ ಬಿಟ್ಟು ಹೇಳುತಿಹುದು”… “ಮಾತೃ ದೇವೋ ಭವ” ಎಂಬ ಸೂಕ್ತಿಯ ಕನ್ನಡ ಅನುವಾದ ಎಂದರೂ ತಪ್ಪಿಲ್ಲ. ಒಂದು ಆದರ್ಶ ಸಮಾಜಕ್ಕೆ ಬೇಕಾದ ಎಲ್ಲಾ ಕಿವಿ ಮಾತುಗಳೂ  ಈ ಪದ್ಯದಲ್ಲಿ ಅಡಗಿವೆ. ವೇದವನ್ನೇ ಓದಬೇಕೆಂದಿಲ್ಲ, ರಾಮಾಯಣ,ಮಹಾಭಾರತ,ಭಾಗವತ ದ ಪರಿಚಯವಿಲ್ಲವೇ ಚಿಂತೆಯಿಲ್ಲ. ಈ ಪದ್ಯದಲ್ಲಿ ಎಲ್ಲದರ ಸಾರವೂ ಅಡಗಿದೆ.ಇಂತಹ ಸರಳ ಪದ್ಯಗಳನ್ನು ಓದಿ ಅರ್ಥಮಾಡಿಕೊಂಡರೆ ಸಾಕು,ನಮ್ಮ ಸಂಸ್ಕೃತಿಯ ಪರಿಚಯ ತಾನೇ ತಾನಾಗಿ ಆಗುತ್ತದೆ. ಈ ಬರಹದಲ್ಲಿ ಜನ್ಮಕೊಟ್ಟ “ಅಮ್ಮನ” ಸ್ಮರಣೆಮಾಡುತ್ತಾ ಕೃತಾರ್ಥರಾಗೋಣ. ಮೊದಲ  ಚರಣದಲ್ಲಿ…..

ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ ಜನರು ಧನ್ಯರು |
ಘನತೆಯಿಂದಲವರು ಬಾಳ್ವರೆನುತ ನುಡಿವರು ||

ನಮ್ಮ ಹಿರಿಯರ ಚಿಂತನೆಗೂ ಇಂದಿನವರ ಚಿಂತನೆಗೂ ಅದೆಷ್ಟು ಅಜಗಜಾಂತರ! ಈಗಿನ ದಿನಗಳಲ್ಲಿ ಅಪ್ಪ,ಅಮ್ಮ, ಎಂದು ಮಗುವಿನ ಬಾಯಲ್ಲಿ ಮಾತು ಬರಲಾರಂಭಿಸಿದರೆ ಸಾಕು, ಆಮಗುವನ್ನು ಪ್ರಿ ನರ್ಸರಿ ಗೆ ಕಳಿಸಲು ಪ್ರಾರಂಭಿಸಿ ಬಿಡುತ್ತಾರೆ. ಮೊನ್ನೆ ಒಂದು ಮನೆಗೆ ಹೋಗಿದ್ದೆ. ಆ ಮಗುವಿಗೆ ಇನ್ನೂ  ಅಪ್ಪ, ಅಮ್ಮ, ಎಂಬ ಎರಡಕ್ಷರದ ಪದಗಳೂ ಬರುತ್ತಿಲ್ಲ. ಆಗಲೇ ಆ ಮಗುವಿನ ಮೇಲೆ   ಇಂಗ್ಲೀಶ್ ಪ್ರಹಾರ!! Shut your mouth, don’t cry…..ಇದು ಹೆತ್ತಮ್ಮ ಆ ಮಗುವಿಗೆ ಗದರಿಸುತ್ತಿರುವ ರೀತಿ. ಆ ಮಗು ನಗುವಂತಿಲ್ಲ, ಅಳುವಂತಿಲ್ಲ.ತೆಪ್ಪನೆ ಮಲಗಿರಬೇಕು.ಆ ತಾಯಿಯನ್ನು ನೋಡಿದ ನನಗೆ  ಆ ಮಗುವಿನ ಬಗ್ಗೆ ಕನಿಕರ ಹುಟ್ಟಿತು” ಅಯ್ಯೋ ಎಂತಾ ತಾಯಿಯ ಹೊಟ್ಟೆಯಲ್ಲಿ ಜನ್ಮ ತಾಳಿದೆ, ಈ ಮಗು!
ನಮ್ಮ ಪೂರ್ವಿಕರ ಮಾತು ಕೇಳಿ”  ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು” ಅಬ್ಭಾ! ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರೆ ಆನಂದವಾಗುತ್ತೆ. ಮಗುವಿಗೆ ಆರು ವರ್ಷ ಆಗುವ ವರೆಗೂ ಮನೆಯಲ್ಲಿ ಎಲ್ಲರ ತೊಡೆಯ ಮೇಲೆ ಆಡುತ್ತಾ , ಅಮ್ಮನ ಎದೆಗೆ ಒದೆಯುತ್ತಲೇ  ಅಮ್ಮನ ಎದೆಯಹಾಲು ಹೀರುತ್ತಿದ್ದರೆ, ಆ ತಾಯಿಗೆ ಅದೆಷ್ಟು ಆನಂದವೋ!! ರಾತ್ರಿಯ ಬೆಳದಿಂಗಳ ಚಂದಿರನ ತೋರಿಸುತ್ತಾ  ಮಗುವಿಗೆ ತುತ್ತು ಉಣಿಸುತ್ತಿದ್ದ ಪರಿ, ಜೋಗುಳದ ಹಾಡನ್ನು ಹೇಳುತ್ತಾ  ತೊಟ್ಟಿಲು ತೂಗಿ ಮಗುವನ್ನು ಮಲಗಿಸುತ್ತಿದ್ದ ಆ ದಿನಗಳು…. ತೊಡೆಯ ಮೇಲೆ ಮಲಗಿಸಿಕೊಂಡು ಕಥೆಯನ್ನು ಹೇಳುತ್ತಾ ತಟ್ಟಿ ಮಲಗಿಸುತ್ತಿದ್ದ ಮಧುರ ಕ್ಷಣಗಳು…..ರಾಮ್ ತಾಮ್ ಸೀತಾರಾಮ್…ಎಂದು ಹೇಳುವಾಗ ಮಗು ಚಪ್ಪಾಳೆ ತಟ್ಟುವುದನ್ನು ಅಭ್ಯಾಸ ಮಾಡಿಸಿದ ತಾಯಿ, ಮನೆಗೆ ಯಾರೇ ಬರಲೀ “ ರಾಮ್ ತಾಮ್ ಸೀತಾರಾಮ್” ಎಂದು ಆ ಮಗುವಿನ ಮುಂದೆ ಹೇಳಿದಾಗ ಆ ಮಗು ಕೈ ತಟ್ಟುವುದನ್ನು ತೋರಿಸಿ ಅನುಭವಿಸುತ್ತಿದ್ದ ಸಂತೋಷಕ್ಕೆ ಪಾರವೇ ಇಲ್ಲ.
ಅಜ್ಜೀ,ತಾsssತ, ಮಾವ,ಅತ್ತೆ, ಪಾಪು, ಅಣ್ಣ, ಅಕ್ಕ, ಮಮ್ಮು, ಹೀಗೆ ಎರಡೆರಡಕ್ಷರದ ಮಾತನ್ನು ಹೇಳಿಕೊಟ್ಟು ಆ ಮಗುವಿನ ಬಾಯಲ್ಲಿ ಆ ಪದಗಳನ್ನು ಹೇಳಿಸಿದಾಗ ಅದೆಂತಹ ಆನಂದ!!. ಅದಕ್ಕೇ ಹೇಳಿದರು” ಜನನಿ ತಾನೆ ಮೊದಲ ಗುರುವು”  ಇಂತಹ ಜನನಿಯಿಂದ ಪಾಠ ಕಲಿತ ಜನರು ಧನ್ಯರಾಗಲೇ ಬೇಕಲ್ಲವೇ.
ಮುಂದಿನ ಚರಣದಲ್ಲಿ…..

ಹೊಟ್ಟೆಯಲ್ಲಿ ಹೊತ್ತು ತಾಯಿ , ಬೆಟ್ಟದಷ್ಟು ಕಷ್ಟಗಳನು
ಗಟ್ಟಿ ಮನದಿ ತಾಳ್ವಳವಳು ಕಂದಗೋಸುಗ |
ಬಿಟ್ಟು ಸುಖವ ತಾಳ್ವಳವಳು  ಬಂದ ದುಃಖವ ||

ಈಗ ನಮ್ಮಮ್ಮ ನೆನಪಾಗುತ್ತಾಳೆ. ಅಷ್ಟೇ ಅಲ್ಲ  ಮುಂದೆ ಹೇಳುವ ಘಟನೆಯಿಂದ ಚಿರಕಾಲ ನೆನಪಿನಲ್ಲಿ ಉಳಿಯುತ್ತಾಳೆ. ನನ್ನನ್ನು ಹೊಟ್ಟೆಯಲ್ಲಿಟ್ಟು ಸಲಹುತ್ತಿದ್ದ ದಿನಗಳು.  ಒಂಬತ್ತು ತಿಂಗಳು ತುಂಬಿ ಒಂದೆರಡು ದಿನಗಳಲ್ಲಿ ನಾನು ಪ್ರಪಂಚವನ್ನು ನೋಡ  ಬೇಕಿದೆ! ಆ ದಿನ ಬಂದೇ ಬಿಟ್ಟಿದೆ! ನಮ್ಮಮ್ಮ ಅಂದು ಬೆಳಿಗ್ಗೆ ಮನೆಯ ಎಲ್ಲಾ ಮುಸುರೆ ಮಾತ್ರೆಯನ್ನು ಒಂದು ಕುಕ್ಕೆಗೆ ತುಂಬಿಕೊಂಡು ಮೈಲಿಗೆ ಬಟ್ಟೆಯನ್ನು [ಕೊಳೆ ಬಟ್ಟೆ]  ಒಂದು ಕುಕ್ಕೆಯಲ್ಲಿ ತುಂಬಿಕೊಂಡು ಊರ ಮುಂದಿನ ಕೊಳಕ್ಕೆ ಸುಮಾರು ಒಂದು ಮೈಲಿ ನಡೆದು ಹೋಗಿದ್ದಾರೆ. ಬಟ್ಟೆ ಒಗೆದು, ಪಾತ್ರೆ ತೊಳೆದು ಒಂದು ಕುಕ್ಕೆ ಕೊಂಕಳಲ್ಲಿ ಒಂದು ಕುಕ್ಕೆಯನ್ನು ತಲೆಯಮೇಲಿಟ್ಟುಕೊಂಡು[ಹೊಟ್ಟೆಯಲ್ಲಿ ನಾನು] ಬ್ಯಾಲೆನ್ಸ್ ಮಾಡಿಕೊಂಡು ಮನೆಗೆ ಬರುತ್ತಾರಂತೆ. ಅಡುಗೆ ಮಾಡುವ ಹೊತ್ತಿಗೆ ಸಾಕಾಗಿ ಹೋಗಿದ್ದಾರೆ. ಕ್ಷಣಕಾಲ ಮಲಗಿ ಕೊಳ್ಳಬೇಕೆನಿಸಿತಂತೆ ಚಾಪೆಯ ಮೇಲೆ ಸ್ವಲ್ಪಹೊತ್ತು ವಿರಮಿಸೋಣವೆಂದುಕೊಳ್ಳುತ್ತಾರೆ, ಅಷ್ಟರಲ್ಲಿ ನಮ್ಮಜ್ಜಿ “ಏ ನರಸು, ದಿನತುಂಬಿದವಳು ಯಾವಾಗ ಹೆತ್ತು ಹೊಲೆಮನೆ ಸೇರುತ್ತೀಯೋ ,ಅಷ್ಟರೊಳಗೆ ನನಗೆ ಬಡಿಸಿಬಿಡು, ನಾನು ಮಡಿಯಲ್ಲಿ ಊಟಮಾಡಿಬಿಡುತ್ತೇನೆ”  ಎಂದರಂತೆ.
ಸರಿ, ಅಜ್ಜಿಗೂ ಮತ್ತು ಮಕ್ಕಳಿಗೂ ಬಡಿಸಿದರು, ಹೆರಿಗೆ ನೋವು ಕಾಣಿಸಿತು, ತಾನು ಊಟಮಾಡದೆ ನನಗೆ ಜನ್ಮ ಕೊಟ್ಟಳಂತೆ. “ ಹೊಟ್ಟೆಯಲ್ಲಿ ಹೊತ್ತು ತಾಯಿ , ಬೆಟ್ಟದಷ್ಟು ಕಷ್ಟಗಳನು, ಗಟ್ಟಿ ಮನದಿ ತಾಳ್ವಳವಳು ಕಂದಗೋಸುಗ” ಈ ಸಾಲುಗಳಿಗೆ ಬೇರೆ ವಿವರಣೆ ಬೇಕೆ? ನನ್ನ ಜನ್ಮದಿನದ ನೆನಪು ಸಾಲದೇ?

ಮುಂದಿನ ಚರಣದಲ್ಲಿ….
ಕಂದ ಬಳಲಿ ಬಂದನೆಂದು,  ನೊಂದುಕೊಂಡು, ಬೇಗ ಮಮತೆಯಿಂದ ನುಡಿದು, ನುಡಿಸುತಮೃತ
ಬಿಂದುವೆರೆವಳು |ಬೆಂದ ಮನದ ಬೇಗೆಯಳಿಸು ತಂದಗೊಳಿಪಳು ||

ಯಾವ ತಾಯಿಯೇ ಆಗಲೀ ಮಕ್ಕಳು ಮನೆಗೆ ಬಂದು ಊಟಮಾಡುವ ವರೆಗೆ ತಾವು ಊಟಮಾಡುವುದಿಲ್ಲ. ಶಾಲೆಗೆ ಹೋಗಿರಲಿ, ಕಾಲೇಜಿಗೆ ಹೋಗಿರಲಿ, ಅಥವಾ ಪೋಲಿ ಅಲೆಯುವುದಕ್ಕೆ ಹೋಗಿದ್ದರೂ ಸಹ ಮನೆಗೆ ಬಂದು ತನ್ನ ಮಗು ಊಟ ಮಾಡುವ ವರೆಗೆ ಅಮ್ಮನ ಗಂಟಳಲ್ಲಿ ಅನ್ನ ಇಳಿದೀತೇ?......ಮಕ್ಕಳು ಬೆಳೆದು ದೊಡ್ದವರಾದಾಗ ಅಮ್ಮ “ ಗೆದ್ದೇ”  ಎಂದು ನಿಟ್ಟುಸಿರು ಬಿಡುವಾಗ ಅವಳ ಆಯುಶ್ಯ ಮುಗಿಯುತ್ತಾ ಬಂದಿರುತ್ತೆ, ಮಕ್ಕಳು ದೊಡ್ದ ದೊಡ್ದ ಕೆಲಸಗಳಲ್ಲಿ ದೂರದ ಊರುಗಳಲ್ಲೋ ವಿದೇಶದಲ್ಲೋ ಇರುತ್ತಾರೆ. ವೃದ್ಧಾಶ್ರಮದಲ್ಲಿ ವೃದ್ಧ  ಅಪ್ಪ ಅಮ್ಮನಿಗೆ  ಸೀಟ್ ರಿಸರ್ವ್ ಆಗಿರುತ್ತೆ!! ತನ್ನ    ವೃದ್ಧ ಅಪ್ಪ ಅಮ್ಮನನ್ನು ಅವರ  ಅಂತಿಮ ದಿನಗಳಲ್ಲಿ ಹೆತ್ತ ಮಗನೇ   ವೃದ್ಧಾಶ್ರಮ ಸೇರಿಸುವ ಒಂದು ಪುಟ್ಟ ವೀಡಿಯೋ ನೋಡಿದೆ. ದೃಷ್ಯವನ್ನು ನೋಡುವಾಗ ನೋಡುವವರ   ಕಣ್ಣು ತೇವವಾಗುತ್ತೆ!!
ಮುಂದಿನ ಚರಣದಲ್ಲಿ…..
ಎನ್ನ ಚಿನ್ನ ತಣ್ಣಗಿರಲಿ, ಎನ್ನ ರನ್ನ ಸುಖವಪಡೆಯಲೆನ್ನ ಮುದ್ದು ಕಂದ
ಕೀರ್ತಿ ಒರೆದು ಬಾಳಲಿ, ಎನ್ನುತಾಶಿಸುವಳು ತಾಯಿ  ಒಡಲ ಮರುಕದಿ||

ಎಲ್ಲಾ ತಾಯಿಯರ ಬಯಕೆಯೂ ಸಹಜವಾಗಿ  ತನ್ನ ಮಕ್ಕಳು ನೆಮ್ಮದಿಯಿಂದ ,ಸುಖವಾಗಿರಲೆಂಬುದೇ ಆಗಿರುತ್ತದೆ. ಹೌದು ಅವಳು ಮಕ್ಕಳ ನೆಮ್ಮದಿಯನ್ನೇ ಬಯಸುತ್ತಾಳೆ.ಆದರೆ ಮಕ್ಕಳು?..............