ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday 5 November 2014

ಹಾಸನದಲ್ಲಿ ಸಾಮೂಹಿಕ ಅಗ್ನಿಹೋತ್ರ



ಮನುಷ್ಯನು ಯಾವ ಜಾತಿಗಾದರೂ ಸೇರಿರಲಿ,ಯಾವ ಮತಕ್ಕಾದರೂ ಸೇರಿರಲಿ, ಯಾವ ಧರ್ಮಕ್ಕಾದರೂ ಸೇರಿರಲಿ, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಆರಾಧಿಸದೆ ಇರಲು ಅವನಿಗೆ ಸಾಧ್ಯವಿಲ್ಲ. ದೇವರಿಲ್ಲ ಎನ್ನುವನಿಗೂ ಕೂಡ ತನ್ನ ಊಹೆಗರಿಯದ ಶಕ್ತಿಯೊಂದು ಜಗತ್ತನ್ನು ನಿಯಂತ್ರಿಸುತ್ತಿದೆ, ಎಂಬ ಅರಿವು ಆಗ್ಗಾಗೆ ಆಗುತ್ತಲೇ ಇರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂದರೂ ಕೂಡ ಹಲವು ವೇಳೆ ವೈದ್ಯರೂ ಕೂಡ ತಾನು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ, ಇನ್ನು ದೈವೇಚ್ಛೆ! ಎನ್ನುವ ಮಾತು ಕೇಳಿದ್ದೇವೆ.

ಹೌದು, ಭಗವಂತನ ಅಸ್ತಿತ್ವವನ್ನು ನಂಬದೇ ಇರುವವರೂ ಕೂಡ ತನ್ನ ಊಹೆಗೂ ಮೀರಿದ ಶಕ್ತಿಯೊಂದಿದೆ ಎಂದು ನಂಬಲೇ ಬೇಕು.ಅದನ್ನು ಅವನು ಏನೆಂದಾದರೂ ಕರೆದುಕೊಳ್ಳಲಿ. ಹಗಲು-ರಾತ್ರಿ ಎಂಬುದು ಒಮ್ಮೆಯೂ ವೆತ್ಯಾಸವಾಗಲೇ ಇಲ್ಲವಲ್ಲಾ! ಯಾರು ಈ ವ್ಯವಸ್ಥೆ ಮಾಡಿದವರು? ಎಂದಾಗ ಕೆಲವರು ಅದು ಪ್ರಕೃತಿ ಸಹಜ ವ್ಯವಸ್ಥೆ ಎಂದು ಬಿಡುತ್ತಾರೆ. ಸರಿ, ಹಾಗೆಂದರೇನು? ಅದರ ನಿಯಂತ್ರಕರಾರು? ಈ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದರೂ ದೇವರನ್ನು ನಂಬುವುದಿಲ್ಲವೆಂದು ವಾದಿಸುವವರಿದ್ದಾರೆ.ಇರಲಿ. ನಾಸ್ತಿಕವಾದ ಬೆಳೆಯಲು ಹಲವು ಭಾರಿ ಆಸ್ತಿಕರ ವಿಚಿತ್ರ ನಡವಳಿಕೆಯೂ ಕಾರಣ. ಈ ಲೇಖನದ ಉದ್ಧೇಶ ಇದಲ್ಲ.

ದೇವರನ್ನು ನಂಬುವವರು ನಿತ್ಯವೂ ದೇವರ ಆರಾಧನೆ ಮಾಡುತ್ತೇವೆ. ದೇವರಿಗೆ ನೈವೇದ್ಯ ಮಾಡುತ್ತೇವೆ. ಆ ಭಗವಂತನಿಗೆ ಅರ್ಪಿಸಿದೆವೆಂಬ ಭಾವದಿಂದ ಪ್ರಸಾದ ರೂಪದಲ್ಲಿ ಆ ನೈವೇದ್ಯವನ್ನು ನಾವೇ ಸೇವಿಸುತ್ತೇವೆ. ಇಂತಾ ಭಕ್ತಿಭಾವ ಬೇಕು.ಇರಲಿ. ಆದರೆ ನಾವು ಯಾವ ಯಾವ ರೀತಿಯಲ್ಲಿ ಭಗವಂತನನ್ನು ಆರಾಧಿಸಿದರೂ ಅವನನ್ನು ಕಲ್ಪಿಸಿಕೊಳ್ಳಬಹುದೇ ಹೊರತೂ ನೋಡಲು ಸಾಧ್ಯವಿಲ್ಲ. ಅವನು ಸರ್ವವ್ಯಾಪಿಯಾದ್ದರಿಂದ ನಮ್ಮ ಒಳಗೇ ಇರುವ ಆ ಭಗವಂತನೇ ನಮಗೆ ಬಲು ಹತ್ತಿರದವನು.

ಇನ್ನು ಅವನನ್ನು ನಮ್ಮ ಹೊರಗೆ ಕಾಣಬೇಕೆಂದರೆ ಚೇತನರೂಪದಲ್ಲಿರುವ ತಂದೆ-ತಾಯಿಯರಲ್ಲಿ,ಗುರುಗಳಲ್ಲಿ ಕಾಣಬಹುದು. ಗೋಮಾತಾ ಪ್ರತ್ಯಕ್ಷ ದೇವತಾ ಎನ್ನುತ್ತಾರೆ. ನಮಗೆ ಜನ್ಮಕೊಟ್ಟು ಸಲಹಿದ ತಂದೆತಾಯಿ, ವಿದ್ಯೆ ಕೊಟ್ಟ ಗುರುಗಳು, ನಮ್ಮ ಜೀವನಪೂರ್ಣ ಹಾಲು ಕೊಟ್ಟು ಸಲಹಿದ ಗೋಮಾತೆ ನಮಗೆ ಪ್ರತ್ಯಕ್ಷ ದೇವತೆಗಳು. ತಂದೆ,ತಾಯಿ, ಗುರು ಮತ್ತು ಗೋಮಾತೆಯ ಸೇವೆಯನ್ನು ಮಾಡುವುದೇ ಭಗವಂತನ ಪೂಜೆ.

ಪಂಚ ಭೂತಗಳಿಂದ ಈ ಶರೀರವು ಆಗಿದ್ದು ಜಗತ್ತೂ ಕೂಡ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಈ ಪಂಚಭೂತಗಳಾದ ನೀರು,ಗಾಳಿ,ಭೂಮಿ,ಆಕಾಶ ಮತ್ತು ಅಗ್ನಿ-ಇವುಗಳೂ ದೇವತೇ ಗಳೆ ಆಗಿವೆ.

ನಮ್ಮ ಪೂರ್ವಜರಾದ ಋಷಿಮುನಿಗಳು ನಮ್ಮಂತೆ ವಿಗ್ರಹವನ್ನು ಆರಾಧಿಸಲಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸಿದರು. ಸೂರ್ಯನನ್ನು, ಅಗ್ನಿಯನ್ನು ಆರಾಧಿಸಿದರು. ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆ, ಪ್ರತ್ಯಕ್ಷ ಅಗ್ನಿಯಲ್ಲಿ ಹೋಮವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸಿ ಅಗ್ನಿದೇವತೆಯು ಸ್ವೀಕರಿಸುವುದನ್ನು ಕಂಡರು.

ನಾವು ಬಾಯಿ ಮೂಲಕ ಸ್ವೀಕರಿಸಿದ ಆಹಾರವು ನಮ್ಮ ಜೀರ್ಣಕೋಶಗಳಲ್ಲಿ ಜೀರ್ಣವಾಗಿ ರಸವಾಗಿ ಪರಿವರ್ತಿತವಾಗಿ ರಕ್ತದ ಮೂಲಕ ಶರೀರದ ಅಂಗಾಂಗಗಳಿಗೆಲ್ಲಾ ತಲುಪುವುದಲ್ಲವೇ ಅದೇ ರೀತಿಯಲ್ಲಿ ಯಜ್ಞದಲ್ಲಿ ಕ್ರಿಯೆ ನಡೆಯುತ್ತದೆಂದರೆ ನಿಮಗೆ ಅಚ್ಚರಿಯಾಗಬಹುದು.

ಯಜ್ಞದಲ್ಲಿ ಅರ್ಪಿಸಿದ ಹವಿಸ್ಸು ಸೂಕ್ಷ್ಮಾಣುಗಳಾಗಿ ಪರಿವರ್ತಿತವಾಗಿ ಮೊದಲು ಗಾಳಿಯಲ್ಲಿ ಸೇರಿ ನಮಗೆ ಪ್ರಾಣವಾಯುವಿಗೆ ಕಾರಣವಾಗುವುದು. ಅಷ್ಟೇ ಅಲ್ಲ ನಂತರ ಮೇಘಮಂಡಲವನ್ನು ಸೇರಿ ಅದರಲ್ಲಿನ ಜಲಕ್ಕೆ ಸೇರುವುದು. ಮಳೆಯೊಡನೆ ಮತ್ತೆ ಭೂಮಿ ತಲುಪಿ ಸಸ್ಯ ಸಂಮೃದ್ಧಿಗೆ ಕಾರಣವಾಗುವುದು. ಆದುದರಿಂದಲೇ ನಮ್ಮ ಋಷಿಮುನಿಗಳು ಅಗ್ನಿರ್ವೈದೇವಾನಾಂ ಮುಖಮ್ ಎಂದರು. ಅಂದರೆ ಅಗ್ನಿಯು ದೇವತೆಗಳಿಗೆ ಬಾಯಿ ಎಂದು ಎಂದು ಪರಿಶೋಧಿಸಿ ತಿಳಿದುಕೊಂಡರು. ಒಂದು ವಿಚಾರ ಗೊತ್ತಿರಬೇಕು. ಯಜ್ಞದಲ್ಲಿ ಔಷಧೀಯ ಗುಣಗುಳುಳ್ಳ ಹವಿಸ್ಸನ್ನು ಅರ್ಪಿಸಿದಾಗ ಮಾತ್ರವೇ ವಾಯು ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ಅರಳೀ ಸಮಿತ್ತು ಮತ್ತು ಹಸುವಿನತುಪ್ಪದ ಜೊತೆಗೆ ಹಿಮಾಲದಿಂದ ತರಿಸಿರುವ ಗಿಡಮೂಲಿಕೆಗಳ ಪುಡಿಯನ್ನು ಮಾತ್ರವೇ ವೇದಭಾರತಿಯು ನಿತ್ಯವೂ ನಡೆಸುವ ಅಗ್ನಿಹೋತ್ರದಲ್ಲಿ ಉಪಯೋಗಿಸುತ್ತೇವೆ.

ಆದ್ದರಿಂದ ಇಷ್ಟು ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಿಯೇ ನಮ್ಮ ಪೂರ್ವಜರು ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಎರಡು ಹೊತ್ತು ಅಗ್ನಿಹೋತ್ರವನ್ನು ಮಾಡುತ್ತಾ ಆರೋಗ್ಯಪೂರ್ಣ ಬದುಕು ನಡೆಸಿದರು. ಮಧ್ಯ ಕಾಲದಲ್ಲಿ ಅಗ್ನಿಹೋತ್ರವನ್ನು ಕೆಲವರು ಮಾತ್ರ ಮುಂದುವರೆಸಿದರೆ ಜನಸಾಮನ್ಯರಿಂದ ಮರೆಯಾಗಿರುವುದನ್ನು ಕಾಣುತ್ತೇವೆ. ಕಾರಣ ಏನಾದರೂ ಇರಲಿ. ಆದರೆ ಇಂದಿನ ಹಲವಾರು ಸಾಮಾಜಿಕ- ಪ್ರಾಕೃತಿಕ ಸಮಸ್ಯೆಗಳನ್ನು ನೋಡಿದಾಗ ಇವುಗಳ ಪರಿಹಾರಕ್ಕೆ ಅಗ್ನಿಹೋತ್ರವು ದೊಡ್ದ ಪ್ರಮಾಣದ ಕೊಡುಗೆ ನೀಡಬಲ್ಲದು. ಅದರ ಅಧ್ಯಯನ ಮತ್ತು ಪ್ರಯೋಗಗಳು ಸಾಕಷ್ಟು ನಡೆದು ಪಾಶ್ಚಿಮಾತ್ಯರೂ ಸಹ ಅಗ್ನಿಹೋತ್ರದ ಪ್ರಯೋಜನ ಪಡೆಯುತ್ತಿದ್ದಾರೆ.

ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸಿದಾಗ ಪ್ರಕೃತಿಯ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆಂಬುದನ್ನು ಒಪ್ಪಿದರೂ ಈ ಮಂತ್ರಗಳೇಕೆ? ಹಾಗೆಯೇ ಹವಿಸ್ಸನ್ನು ಯಜ್ಞಕ್ಕೆ ಹಾಕಿದರೆ ಆಗದೇ ಎಂದು ಪ್ರಶ್ನಿಸುವವರಿದ್ದಾರೆ. ಅಗ್ನಿಹೋತ್ರದ ಆರಂಭದ ಕೆಲವು ಮಂತ್ರಗಳ ಅರ್ಥವನ್ನು ತಿಳಿದರೆ ಅದರ ಮಹತ್ವ ನಮಗೆ ಅರ್ಥವಾಗುತ್ತದೆ. ಅಗ್ನಿಹೋತ್ರದ ಬಾಹ್ಯ ಪರಿಣಾಮಗಳು ವಾಯುಮಂಡಲವನ್ನು ಶುದ್ಧಿಮಾಡಿದರೆ ಅಗ್ನಿಹೋತ್ರದಲ್ಲಿ ಹೇಳುವ ಮಂತ್ರಗಳು ನಮ್ಮ ಆಂತರ್ಯವನ್ನು ಶುದ್ಧಿಮಾಡಲು ನೆರವಾಗುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿಚಾರ ಮಾಡೋಣ.

ಆರಂಭದಲ್ಲಿ ಆಚಮನ ಮಾಡುವಾಗ ಭಗವಂತನನ್ನು ಸ್ಮರಿಸುತ್ತಾ ತೈತ್ತರೀಯ ಅರಣ್ಯಕ ಮಂತ್ರವನ್ನು ಹೇಳುತ್ತೇವೆ.

ಓಂ ಅಮೃತೋಪಸ್ತರಣಮಸಿ ಸ್ವಾಹಾ

ಓಂ ಅಮ್ರುತಾಮಪಿಧಾನಮಸಿ ಸ್ವಾಹಾ

ಓಂ ಸತ್ಯಂ ಯಶಃ ಶ್ರೀರ್ಮಯೀ ಶ್ರೀಃ ಶ್ರಯತಾಂ ಸ್ವಾಹಾ

ಹೇ ಪ್ರಭೂ ,ನೀನು ನಮಗೆ ಆಧಾರವಾಗಿದ್ದೀಯೇ,ನೀನು ಎಲ್ಲೆಲ್ಲಿಯೂ ಆವರಿಸಿದ್ದೀಯೆ, ನನ್ನಲ್ಲಿ ಸತ್ಯವೂ, ಯಶವೂ, ಸೌಂದರ್ಯವೂ, ಸಂಪತ್ತೂ, ನೆಲೆಗೊಳ್ಳಲಿ ಎಂಬುದು ಈ ಮಂತ್ರಗಳ ಅರ್ಥ.

ನಂತರ ನಮ್ಮ ಅಂಗಾಂಗಗಳನ್ನು ಸ್ಪರ್ಶಿಸುತ್ತಾ ಈ ಕೆಳಗಿನ ಮಂತ್ರಗಳನ್ನು ಹೇಳುತ್ತೇವೆ

ಓಂ ವಾಂಙ್ಮ ಆಸ್ಯೇಸ್ತು [ ನನ್ನ ನಾಲಿಗೆಯಲ್ಲಿ ವಾಕ್‌ಶಕ್ತಿ ಸ್ಥಿರವಾಗಿರಲಿ]

ಓಂ ನಸೋರ್ಮೇ ಪ್ರಾಣೋಸ್ತು [ನನ್ನ ಮೂಗಿನಲ್ಲಿ ಪ್ರಾಣಶಕ್ತಿ ಇರಲಿ]

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು [ನನ್ನ ಕಣ್ಣುಗಳಲ್ಲಿ ದರ್ಶನಶಕ್ತಿ ಇರಲಿ]

ಓಂ ಕರ್ಣಯೋರ್ಮೇ ಶ್ರೋತ್ರಮಸ್ತು [ನನ್ನ ಕಿವಿಗಳಲ್ಲಿ ಶ್ರವಣ ಶಕ್ತಿ ಇರಲಿ]

ಓಂ ಬಾಹ್ವೋರ್ಮೇ ಬಲಮಸ್ತು [ನನ್ನ ಬಾಹುಗಳಲ್ಲಿ ಬಲವಿರಲಿ]

ಓಂ ಊರ್ವೋರ್ಮೇ ಓಜೋಸ್ತು [ನನ್ನ ತೊಡೆಗಳಲ್ಲಿ ಓಜಸ್ಸಿರಲಿ]

ಓಂ ಅರಿಷ್ಟಾನಿ ಮೇsಂಗಾನಿ ತನೂಸ್ತನ್ವಾ ಮೇ ಸಹಸಂತು

[ನನ್ನ ಎಲ್ಲಾ ಅಂಗಾಂಗಗಳೂ ಸಮರ್ಥವಾಗಿರಲಿ]

ಅಂಗಾಂಗ ಸ್ಪರ್ಷ ಮಾಡುತ್ತಾ ಇಷ್ಟೆಲ್ಲಾ ಹೇಳಿದ ನಂತರ ಅಗ್ನಿಹೋತ್ರದಲ್ಲಿ ಹವಿಸ್ಸನ್ನು ಅರ್ಪಿಸುವಾಗ ಇದಂ ನ ಮಮ ಅಂದರೆ ಈ ಯಜ್ಞವನ್ನು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೇನೆಂದು ಪ್ರತಿದಿನವೂ ಹೇಳುತ್ತೇವೆ. ಈ ನೆಲೆಯಲ್ಲಿ ಅಂಗಸ್ಪರ್ಷ ಮಂತ್ರಗಳನ್ನು ಅರ್ಥ ಮಾಡಿಕೊಳ್ಳೋಣ.

ಓಂ ವಾಂಙ್ಮ ಆಸ್ಯೇಸ್ತು ಎನ್ನುವ ಮಂತ್ರವನ್ನು ಹೇಳುವಾಗ ನನ್ನ ನಾಲಿಗೆಯಲ್ಲಿ ಇಂದು ಒಳ್ಳೆಯ ಮಾತುಗಳೇ ಬರಲಿ ಎಂದು ಸಂಕಲ್ಪಿಸಬೇಕು. ಅಂತೆಯೇ ಕಿವಿಯಲ್ಲಿ ಒಳ್ಳೆಯದನ್ನೇ ಕೇಳೋಣ, ಕಣ್ಣಿನಿಂದ ಒಳ್ಳೆಯದನ್ನೇ ಕಾಣೋಣ, ನಮ್ಮ ಶರೀರವು ಒಳ್ಳೆಯದನ್ನೇ ಮಾಡಲಿ ಎಂದು ಬೆಳಿಗ್ಗೆ ಒಮ್ಮೆ ಸಂಕಲ್ಪಮಾಡಿದರೆ ನಮ್ಮಿಂದ ಅಚಾತುರ್ಯ ಆಗಲಾರದಲ್ಲವೇ? ಆದ್ದರಿಂದ ಮಂತ್ರವನ್ನು ಹೇಳುತ್ತಾ ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುವುದು.

ಇಂತಹ ಒಂದು ಚಿಕ್ಕದಾದ , ಸರಳವಾದ ಅಗ್ನಿಹೋತ್ರವನ್ನು ಎಲ್ಲರೂ ಕಲಿಯೋಣ ಬನ್ನಿ. ನಿತ್ಯವೂ ಮಾಡುವ ಅಗ್ನಿಹೋತ್ರಕ್ಕೆ ಮೂರ್ನಾಲ್ಕು ಚಮಚ ಹಸುವಿನ ತುಪ್ಪ ಖರ್ಚಾಗುತ್ತದಷ್ಟೆ. ಆದರೆ ಅದರ ಲಾಭ ಅಪಾರ.

ಅಗ್ನಿಹೋತ್ರವನ್ನು ಯಾವ ಜಾತಿಭೇದ,ಲಿಂಗಭೇದ,ವಯಸ್ಸಿನ ಭೇದವಿಲ್ಲದೆ ಮಾಡಬಹುದು. ಬ್ರಹ್ಮಚಾರಿಗಳೂ ಮಾಡಬಹುದು. ದಂಪತಿಗಳು ಒಟ್ಟಾಗಿ ಕುಳಿತು ಮಾಡಬಹುದು.ಅಥವಾ ಒಬ್ಬರೇ ಮಾಡಿದರೂ ಅದರ ಫಲ ಇದ್ದೇ ಇದೆ.

ದಿನಾಂಕ ೧೦.೧೧.೨೦೧೪ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಹುಬ್ಬಳ್ಳಿಯ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ಹಾಸನದ ನೆಹರು ರಸ್ತೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.ಎಲ್ಲರೂ ಉಚಿತವಾಗಿ ಪಾಲೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಎಲ್ಲಾ ವಿವರವನ್ನೂ ಪ್ರಕಟಿಸಲಾಗಿದೆ. ಎಲ್ಲರಿಗೂ ವೇದಭಾರತಿಯು ಹೃದಯಪೂರ್ವಕ ಸ್ವಾಗತ ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೬೬೩೫೭೨೪೦೬ ಸಂಪರ್ಕಿಸಿ.



Wednesday 17 September 2014

ಸಾಮೂಹಿಕ ಅಗ್ನಿಹೋತ್ರ





ಹಾಸನ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗ


: ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು. ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ http://www.divshare.com/download/26086812-18b" height="426" src="https://scontent-b-dfw.xx.fbcdn.net/hphotos-xpf1/v/t1.0-9/10687078_337665919734841_705836925885351718_n.jpg?oh=b3f6ced5f85ccd2c9af0929334570b14&oe=548F1871" style="margin-left: auto; margin-right: auto;" width="640" />
ಹುಬ್ಬಳ್ಳಿಯ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಕನಸು-ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಬೃಹತ್ ಕಾರ್ಯಕ್ರಮ





ಹಾಸನದ ವೇದಭಾರತಿಯ ಸದಸ್ಯರು ಪಠಿಸುವ ಈಶ್ವರಸ್ತುತಿ ಮತ್ತು ಅಗ್ನಿಹೋತ್ರ ಮಂತ್ರವನ್ನು ಇಲ್ಲಿ ಕೇಳಬಹುದು. ಹೊಸಬರು ಕಲಿಯಲು ಅನುವಾಗುವಂತೆ ಇನ್ನೆರಡು-ಮೂರು ದಿನಗಳಲ್ಲಿ  ಆಡಿಯೋಕ್ಲಿಪ್ ಅಳವಡಿಸಲಾಗುವುದು.

Sunday 31 August 2014

ವೇದದ ಚಿಂತನೆ ಎಂದರೆ ಅಂದಿಗೂ. ಇಂದಿಗೂ , ಎಂದೆಂದಿಗೂ ಹೊಂದುವ ವಾಸ್ತವ ಸತ್ಯಗಳು

         ಯಾರೊಬ್ಬರ ಖಾಸಗೀ ಬದುಕಿನಲ್ಲೂ ಯಾರೂ  ಮುಖತೂರಿಸುವಂತಿಲ್ಲ. ಅವರವರ ಬದುಕು ಅವರವರ ಚಿಂತನೆಯಂತೆ ಸಾಗುತ್ತದೆ.ಅದು ಅವರ ಸ್ವಾತಂತ್ರ್ಯ. ಆದರೆ ವೇದದ ವಿಚಾರ ಮಾತಾಡುವಾಗ ಯಾರ ಸ್ವಾತಂತ್ರ್ಯಕ್ಕೂ ಧಕ್ಕೆ ಮಾಡುವುದಕ್ಕಲ್ಲ, ಬದಲಿಗೆ ಜೀವನದ ಉತ್ಕೃಷ್ಟಯ  ಬಗ್ಗೆ ಅರಿವು ಹೆಚ್ಚಾಗಲು ಬಾಗಿಲು ತೆರೆದುಕೊಳ್ಳುವ ಅವಕಾಶ. ನಮ್ಮ ಆತ್ಮೋನ್ನತಿಗೆ ಅವಕಾಶ ಲಭ್ಯವಾಗುತ್ತದೆ. ಆದ್ದರಿಂದ ವೇದದ ವಿಚಾರ ಬಂದಾಗ ಅದು ಉತ್ತಮವಾದ ಜೀವನಕ್ಕೆ   ನೆರವು ನೀಡುವ ಜ್ಞಾನವೇ ಹೊರತೂ ಎಲ್ಲಾ ಪದ್ದತಿಗಳಂತೆ     ಅದೊಂದು ಪದ್ದತಿಯೆಂದು ಭಾವಿಸುವ ಅಗತ್ಯವಿಲ್ಲ. 

         ಸಾವಿರಾರು ವರ್ಷಗಳು ನಾವು ದಾಸ್ಯಕ್ಕೊಳಗಾಗಿದ್ದೆವು. ಆ ಸಂದರ್ಭದಲ್ಲಿ ವೈದಿಕ ಮಾರ್ಗವು     ಕ್ರಮೇಣ  ನಶಿಸಿ ಈಗಿರುವ ಎಡಬಿಡಂಗಿ ಹಂತವನ್ನು ತಲುಪಿದ್ದಾಗಿದೆ. ವೇದವನ್ನು ಬಿಡಲಾರೆವು. ಆಚರಣೆಯಲ್ಲಿರುವ ಸಂಪ್ರದಾಯ ಬಿಡಲಾರೆವು.ಎಲ್ಲವನ್ನೂ ಸೇರಿಸಿ " ನಮ್ಮ ವೇದ, ಪುರಾಣ, ಸಂಪ್ರದಾಯ" ಎಲ್ಲಾ ಪದವನ್ನೂ  ಒಂದೇ ತಕ್ಕಡಿಯಲ್ಲಿ ತೂಗಿನೋಡುವ ಪ್ರಯತ್ನವನ್ನು ಮಾಡುತ್ತೇವೆ. ವೇದವನ್ನು ಸರಳವಾಗಿ  ಅರ್ಥೈಸಲು ಪುರಾಣದ ಕಥೆಗಳನ್ನು ಬರೆದೆವು. ಅವುಗಳಲ್ಲಿ ಇಂದಿಗೆ ಎಷ್ಟು ಬೇಕು, ಎಷ್ಟು ಬೇಡ ಎಂಬುದು ಗೊತ್ತಾಗದೇ ಸಂಶಯಗ್ರಸ್ತರಾಗಿ ಉಳಿದೆವು.    ಆದರೆ ವೇದದ ಚಿಂತನೆ ಎಂದರೆ ಅಂದಿಗೂ.   ಇಂದಿಗೂ , ಎಂದೆಂದಿಗೂ ಹೊಂದುವ ವಾಸ್ತವ ಸತ್ಯಗಳು.ಅವು ಕಟ್ಟು ಕಥೆಗಳಲ್ಲ. ಬೆಂಕಿಯು ಯಾವ ಕಾಲದಲ್ಲೂ, ಯಾವ ಪ್ರದೇಶದಲ್ಲೂ ಹಾಗೂ ಯಾರೂ ಮುಟ್ಟಿದರೆ ಸುಡುತ್ತದೆಂಬುದು ಎಷ್ಟು ಸತ್ಯವೋ   ವೇದವು  ಅಷ್ಟು ಸತ್ಯ. ಅಷ್ಟು ವೈಜ್ಞಾನಿಕ. 
                 ಆದರೆ  ಯಾವುದೋ ಕಾಲದಲ್ಲಿ ಅದರಲ್ಲೂ ಮೂಗು ತೂರಿವುವ ಪ್ರಯತ್ನಮಾಡಿ ವೇದವನ್ನು ಸರಿಯಾಗಿ ಅರ್ಥೈಸದೆ ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿದ್ದರ ಪರಿಣಾಮ ಈಗಿನ ಹಲವು ಆಪಾದನೆಗಳು ವೇದದ ಮೇಲೆ. ಆದರೆ  ವೇದವನ್ನು  ಯಾಸ್ಕರ  ನಿರುಕ್ತದ ಆಧಾರದಲ್ಲಿ ಅರ್ಥೈಸಿದ್ದೇ ಆದರೆ ವೇದವು ನಮ್ಮ ಜೀವನವನ್ನು ಉನ್ನತಿಗೆ ಏರಿಸಬಲ್ಲದು. ಅಲ್ಲದೆ     ಮಾನವೀಯತೆಗೆ  ವಿರುದ್ಧವಾದ ಯಾವ ಅಂಶವೂ ವೇದದಲ್ಲಿ ಸಿಗಲಾರದು.

          ಆದ್ದರಿಂದ ನಮ್ಮ ಸಂಪ್ರದಾಯಗಳು ಏನೇ ಇರಲಿ.  ವೇದದ ಆಧಾರದಲ್ಲಿ ಅದರಲ್ಲಿ ಸತ್ಯವನ್ನು ಕಾಣುವ ಪ್ರಯತ್ನ ಮಾಡಿದಾಗ  ಅಸತ್ಯವಾದ ಸಂಗತಿಗಳು, ಮಾನವೀಯ ವಿರೋಧಿ ಆಚರಣೆಗಳು ತಾನೇ ತಾನಾಗಿ ದೂರವಾಗುವುದರಲ್ಲಿ ಸಂದೇಹವಿಲ್ಲ.  ಹಲವಾರು ವರ್ಷಗಳು ಶ್ರೀ ಸುಧಾಕರಶರ್ಮರ ವಾದವನ್ನು ಒಪ್ಪದೆ ಚರ್ಚೆ ಮಾಡಿದಮೇಲೆ ನನಗಂತೂ ವೇದವಲ್ಲದೆ ಬೇರೆ ದಾರಿ ಕಾಣುತ್ತಿಲ್ಲ. ವೇದವು ನನಗೆ  ನಿರ್ಭಯತೆಯನ್ನು ನೀಡಿರುವುದರಲ್ಲಿ ಎರಡು ಮಾತಿಲ್ಲ. ಮನುಷ್ಯರಿಗೆ ದೇವರಲ್ಲಿ ಭಯ ಇರಬಾರದು.ಭಯವು ಮೌಢ್ಯಕ್ಕೆ ಎಡೆಮಾಡಿಕೊಡುತ್ತದೆ. ವೇದದ     ಬೆಳಕಿನಲ್ಲಿ  ನಮ್ಮ ಚಿಂತನೆಗಳು ಆರಂಭವಾದರೆ ನಿರ್ಭಯತೆ ,ಸ್ಪಷ್ಟತೆ ತಾನಾಗಿ ಲಭ್ಯವಾಗುತ್ತದೆ.

Saturday 5 July 2014

ವೇದಸುಧೆ : ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ

ವೇದಸುಧೆ : ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ: ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ. ವೇದಭಾರತಿಯ ಎರಡು ವರ್ಷಗಳ ನಿರಂತರ ಸತ್ಸಂಗದ ಅದ್ಭುತ ಪರಿಚಯದ ಅಪೂರ್ವ ಅವಕಾಶ. ನಿನ್ನೆ ಹಾಸನದಲ್ಲಿ . ಅದರ ಆರಂಭವೇ ವೇದಭಾರತಿಯ ...

Monday 30 June 2014

ವೇದಸುಧೆ : ವೇದಭಾರತಿಯ ವಾರ್ಷಿಕೋತ್ಸವ

ವೇದಸುಧೆ : ವೇದಭಾರತಿಯ ವಾರ್ಷಿಕೋತ್ಸವ:          ಕಳೆದ  ಎರಡು ವರ್ಷಗಳಿಂದ "ವೇದಭಾರತಿಯ" ಹೆಸರಲ್ಲಿ "ಎಲ್ಲರಿಗಾಗಿ ವೇದ" ಧ್ಯೇಯದೊಡನೆಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿ ಎರ...

Saturday 1 March 2014

ನಮ್ಮ ಮನೆಗಳು ಹೇಗಿರಬೇಕು

ನಮ್ಮ ಮನೆಗಳು  ಹೇಗಿರಬಾರದೆಂಬುದನ್ನು  ಅಥರ್ವ ವೇದದ ಒಂದು ಮಂತ್ರವು ಸೊಗಸಾಗಿ ಹೇಳಿದೆ.
ಅಸೌ ಯೋ ಅಧರಾತ್ ಗೃಹಸ್ತತ್ರ ಸನ್ತ್ವರಾಯ್ಯ: |
ತತ್ರ ಸೇದಿರ್ನುಚ್ಯತು  ಸರ್ವಾಶ್ಚ ಯಾತು ಧಾನ್ಯ: ||
[ಅಥರ್ವ:೨.೧೪.೩]
ಯ: = ಯಾವ
ಗೃಹ:  = ಮನೆಯು
ಅಧರಾದ್ = ಅಂಧಕಾರದಿಂದ ತುಂಬಿ ನಿಮ್ನ ಸ್ಥಿತಿಯಲ್ಲಿರುವುದೋ
ತತ್ರ= ಅಲ್ಲಿ
ಸರ್ವಾ: = ಎಲ್ಲಾ
ಯಾತು ಧಾನ್ಯ: = ಪ್ರಜೆಗಳನ್ನು ಪೀಡಿಸುವ ವಿಪತ್ತುಗಳು, ರೋಗಗಳು
ಅರಾಯ್ಯ: = ಮನುಷ್ಯನ ಧನಸಂಪತ್ತನ್ನು  ಮತ್ತು ಶೋಭೆಯನ್ನು ಹರಣ ಮಾಡುವಂತಹ ಸಂಕಷ್ಟಗಳು
ಸನ್ತು = ಇರುತ್ತವೆ
ತತ್ರ = ಅಲ್ಲಿ
ಸೇದಿ: = ದು:ಖಗಳು
ನಿ ಉಚ್ಯತು = ಯಾವಾಗಲೂ ಇರುತ್ತವೆ
ಹಾಗೆಂದರೇನು?
ಸತ್ಪುರುಷರಿಲ್ಲದ , ಸತ್ ಕಾರ್ಯಗಳು ನಡೆಯದ ,ಸಜ್ಜನರು ಬಾರದ ,ವಿದ್ಯೆ ವಿಜ್ಞಾನಗಳಿಲ್ಲದ ಮನೆಗಳು ಸಕಲ ಅನರ್ಥಗಳಿಗೂ ನಿಲಯಗಳಾಗುತ್ತವೆ. ಅಲ್ಲಿ ದುಷ್ಟರು . ವಿಷಕೀಟಗಳು.ವಿವಿಧವ್ಯಾಧಿಗಳು, ಅನೇಕ ಆಪತ್ತುಗಳು, ದು:ಖಗಳು ನೆಲೆಸಲು ಅವಕಾಶವಾಗುತ್ತದೆ. ಅಲ್ಲಿ ಒಳ್ಳೆಯವರು ಇರಲಾರರು. ಕೆಲವು ಮನೆಗಳಿಗೆ ಹೋದರೆ ಸ್ವಲ್ಪಹೊತ್ತು ಕುಳಿತುಕೊಳ್ಳಲೂ ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತರೆ ಸಾಕೆನಿಸುತ್ತದೆ.ಇನ್ನು ಕೆಲವು ಮನೆಗಳಲ್ಲಿ ಇನ್ನೂ ಸ್ವಲ್ಪ ಸಮಯ ಇದ್ದು ಹೋಗೋಣ   ಎನಿಸುತ್ತದೆ. ಇಂತಹ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ.
ಸಾದು ಸತ್ಪುರುಷರ ಸಮಾಗಮ,ಸತ್ಕರ್ಮಗಳು ನಡೆಯುವ ಗೃಹಗಳು ಸುಖದಾಯಕವಾಗಿ ಇರಬಲ್ಲವು. ನಾವು ಹಲವು ಗ್ರಂಥಗಳನ್ನು ಓದಬಹುದು, ಹಲವು ಉಪನ್ಯಾಸಗಳನ್ನು ಕೇಳಬಹುದು, ಮಠ ಮಂದಿರಗಳಿಗೆ ಸುತ್ತಬಹುದು, ತೀರ್ಥಯಾತ್ರೆಗಳನ್ನು ಮಾಡಬಹುದು, ಆದರೆ ನಮ್ಮ ಮನೆ ಹೇಗಿರಬೇಕೆಂದು ಎಂದಾದರೂ ಯೋಚಿಸಿದ್ದೇವೆಯೇ? ನಮ್ಮ ಮನೆಯಲ್ಲಿ ಸಿಗದ ಸುಖ-ನೆಮ್ಮದಿಯನ್ನು ಬೇರೆಲ್ಲೋ ಹುಡುಕಿ ಹೊರಟರೆ ಸಿಕ್ಕೀತೇ?
ನಮ್ಮ ಚಿಕ್ಕವಯಸ್ಸಿನಲ್ಲಿ ಹಿರಿಯರು ನಮಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ” ಮನೆಯಲ್ಲಿ ಯಾವಾಗಲೂ ಋಣಾತ್ಮಕ ಮಾತುಗಳನ್ನು ಆಡಬೇಡಿ, ಜಗಳ ಮಾಡಬೇಡಿ. ಬೈದಾಡಬೇಡಿ?.ಹೀಗೆ ಮಾಡಿದರೆ ಮನೆಯ ತೊಲೆಯಲ್ಲಿ ಕುಳಿತಿರುವ ವಾಸ್ತು ಪುರುಷ” ಅಸ್ತು” ಎಂದು ಬಿಡುತ್ತಾನೆ. ಆಗ ಕೆಟ್ಟ  ಮಾತುಗಳನ್ನಾಡಿದರೆ ಕೆಟ್ಟ   ಪರಿಣಾಮವೇ ಆಗುತ್ತದೆ. ಅದಕ್ಕಾಗಿ ಒಳ್ಳೆಯ ಮಾತುಗಳನ್ನೇ ಆಡಿ, ಆಗ ಒಳ್ಳೆಯದೇ ಆಗುತ್ತದೆ.
ವಾಸ್ತು ಪುರುಷ ಎಲ್ಲಿರುತ್ತಾನೋ, ಇರುವುದಿಲ್ಲವೋ ಚಿಂತಿಸಬೇಕಾಗಿಲ್ಲ. ಆದರೆ  ನಮ್ಮ ಹಿರಿಯರ ಮಾತಿನ ಸಂದೇಶವನ್ನು ಗಮನಿಸಬೆಕಲ್ಲವೇ? ಒಳ್ಳೆಯ ಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಒಳ್ಳೆಯ ಪರಿಣಾಮ ಆಗಲೇಬೇಕು. ಇದು ವೈಜ್ಞಾನಿಕವಾಗಿ ಕೂಡ ಸತ್ಯವೇ ಹೌದು. ವೇದವು ಇನ್ನೂ ಮುಂದೆ ಹೋಗಿ ತಿಳಿಸುತ್ತದೆ” ಸಜ್ಜನರ ಸಾಮೀಪ್ಯವಿರಬೇಕು , ಸತ್ ಕಾರ್ಯಗಳು ನಡೆಯುತ್ತಿರಬೇಕು” ಇಲ್ಲವಾದಲ್ಲಿ  ಅಂತಹ ಮನೆಯಲ್ಲಿ ಜನರ ನೆಮ್ಮದಿ ಹಾಳಾಗುತ್ತದೆ, ಅನಾರೋಗ್ಯ,ಅಸಹನೆ, ದು:ಖ ಎಲ್ಲವೂ ಸುತ್ತಿಕೊಳ್ಳುತ್ತವೆ.

ಹೌದಲ್ಲವೇ? ಇವೆಲ್ಲವೂ ನಮ್ಮ ಅರಿವಿಗೆ ತಿಳಿದಿರುವ ವಿಷಯಗಳೇ ಆಗಿವೆ. ಆದರೂ ನಮ್ಮ ಮನೆಗಳಿಗೆ ಯಾರು ಬಂದು ಹೋಗುತ್ತಾರೇ, ಯಾವ ಮಾತುಕತೆ ನಡೆಯುತ್ತದೆ, ಯಾವುದನ್ನೂ ನಾವು ಗಮನಿಸುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ  ನಮ್ಮ ಮನೆಯಲ್ಲಿ ಸ್ಥಾನಪಡೆದಿರುವ ಟಿ.ವಿ ಎಂಬ ಪೆಡಂಬೂತ!!
ಟಿ.ವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳು ಬಿತ್ತರಿಸುವುದಿಲ್ಲವೆಂದಲ್ಲ, ಆದರೆ ಬಹುಪಾಲು ಮನೆಗಳಲ್ಲಿ ಗಮನಿಸಿ, ದಿನದಲ್ಲಿ ಆರೇಳು ಗಂಟೆಗೂ ಮಿಗಿಲಾಗಿ, ಅಶ್ಲೀಲ ದೃಶ್ಯಗಳು, ರಕ್ತಸಿಕ್ತ ಕೊಲೆ ಸುಲಿಗೆಯ ದೃಷ್ಯಗಳು, ಕಿವಿಯನ್ನು ಕತ್ತರಿಸುವಂತಹ ಕರ್ಕಶ ಹಾಡುಗಳು!!
ರಾತ್ರಿ ಮಲಗುವಾಗಲೂ “ ಕ್ರೈಮ್ ಸ್ಟೋರಿ” ನೋಡಿ ಮಲಗುವ ಎಷ್ಟು ಮನೆಗಳಿಲ್ಲಾ! ಮಲಗುವ ವೇಳೆಯಲ್ಲೂ ಇಂತಹ ಭಯಾನಕ ದೃಷ್ಯಗಳನ್ನು ನೋಡಿ ಮಲಗಿದಾಗ ನಿದ್ರೆಯಲ್ಲಿ ನಮ್ಮ ಮನ:ಸ್ಥಿತಿ ಹೇಗಿದ್ದೀತು? ಸುಖವಾದ ನಿದ್ರೆಯು ಬಯಸಿದರೆ ಸಿಕ್ಕೀತೇ?

ನಮ್ಮ ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನೇರವಾದ ಸಂಬಂಧವಿದೆ ಎಂದು ಮನೋವೈದ್ಯರು ಸಾರುತ್ತಿದ್ದಾರೆ, ಆದರೂ ನಾವು ನಮ್ಮ ಸ್ವಾಸ್ಥ್ಯದ ಬಗ್ಗೆ ಗಮನಕೊಟ್ಟಿದ್ದೇವೆಯೇ? ಇತ್ತೀಚೆಗೆ ವೇದ ವಿದ್ವಾಂಸರೊಬ್ಬರೊಡನೆ ಮಾತನಾಡುತ್ತಿದ್ದೆ”  ವೇದ ಮಂತ್ರ ಗಳನ್ನು ನಿತ್ಯವೂ ಪಠಿಸುವುದರಿಂದ ಏನು ಫಲ ಸಿಗುತ್ತೆ? ನಿಮಗೇನು ಪ್ರಯೋಜನವಾಗಿದೆ? ಎಂದು ಕೇಳಿದಾಗ ಅವರು ಹೇಳಿದರು “ ನೋಡಿ ಏನು ಲಾಭ ಎಂದು ನಾನು ತಲೆಕೆಡಸಿಕೊಳ್ಳಲು ಹೋಗಿಲ್ಲ,  ನನಗೀಗ ಎಪ್ಪತ್ತು ವರ್ಷ ವಯಸ್ಸು, ಆರೋಗ್ಯವಾಗಿದ್ದೇನೆ. ಶುಗರ್, ಬಿ.ಪಿ ಅಥವಾ ಯಾವ ಖಾಯಿಲೆಯೂ ಇಲ್ಲ. ನಿತ್ಯವೂ ನನ್ನ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳುತ್ತೇನೆ, ಬೆಳಿಗ್ಗೆ ಸಂಜೆ  ಒಂದೊಂದು ಗಂಟೆ ಸಂಧ್ಯಾಕರ್ಮಗಳ ಜೊತೆಯಲ್ಲಿ ಒಂದಿಷ್ಟು ವೇದ ಮಂತ್ರಗಳನ್ನು ಹೇಳಿಕೊಳ್ಳುತ್ತೇನೆ. ರಾತ್ರಿ ಎಂಟರೊಳಗೆ ಸ್ವಲ್ಪ ಉಪಹಾರ ಸ್ವೀಕರಿಸಿ  ಹತ್ತರೊಳಗೆ ಹಾಸಿಗೆ ಮೇಲೆ ಹೋದರೆ ಐದು ನಿಮಿಷಗಳಲ್ಲಿ ನಿದ್ರೆ ಬರುತ್ತೆ, ಎಚ್ಚರವಾಗುವಾಗ ಬೆಲಗಿನ ಜಾವ ಐದು ಗಂಟೆಯಾಗಿರುತ್ತೆ. ಐದಕ್ಕೆ ಎದ್ದರೆ ರಾತ್ರಿ ಹತ್ತರವರೆಗೂ ಒಂದಲ್ಲಾ ಒಂದು ಕೆಲಸ ಮಾಡುತ್ತಿರುತ್ತೇನೆ. ಸುಖವಾಗಿದ್ದೇನೆ. ನನಗೆ ಇನ್ನೇನು ಬೇಕು?

ಹೌದು ನಮ್ಮೆಲ್ಲರ ಮನೆಗೂ ಒಂದು ನೀತಿ ಸಂಹಿತೆ ಇರಬೇಕು. ಅದರಮೇಲೆ ನಮ್ಮ ನಿಗಾ ಇರಬೇಕು. ಸಾದು ಸಜ್ಜನರಿಗೆ, ವಿದ್ವಾಂಸರಿಗೆ ಮನೆಯಲ್ಲಿ ಆಶ್ರಯ ಕೊಡಬೇಕು. ಅವರ ಹಿತವಾದ ಮಾತುಗಳು ನಮ್ಮ ಮನೆಯ ಜನರ ಕಿವಿಯಮೇಲೆ ಬೀಳುತ್ತಿರಬೇಕು. ನಮ್ಮ ಮನೆಯಲ್ಲಿ ಸಮಸ್ಯೆ ಇಟ್ಟುಕೊಂಡು ದೇವಾಲಯಗಳಿಗೆ ಸುತ್ತಿದರೆ ಆ ಭಗವಂತನು ಮೆಚ್ಚಿ ಅವನೇ ಬಂದು ನಮ್ಮ ಮನೆ ಸಮಸ್ಯೆಗಳನ್ನು ನಿವಾರಿಸುವುದಿಲ್ಲ. ನಮ್ಮ ಮನೆಯಲ್ಲಿ ಏನೇ ಸಮಸ್ಯೆಗಳಿದ್ದರೂ ಒಂದು ಕುಟುಂಬದ ನಾವೇ ಅದನ್ನು ಸರಿಪಡಿಸಿಕೊಂಡು  ಸಜ್ಜನರ ಸಹವಾಸವನ್ನಿಟ್ಟುಕೊಂಡು ಸತ್ಕರ್ಮಗಳನ್ನು ಮಾಡುತ್ತಾ ನಮ್ಮ ಮನೆಯನ್ನು  ದೇವಾಲಯವನ್ನಾಗಿಯೂ ಮಾಡಬಹುದು, ಸ್ವರ್ಗವಾಗಿಯೂ ಮಾಡಬಹುದು. ಎಲ್ಲವೂ ನಮ್ಮ ಕೈಲೇ ಇದೆ. 

Tuesday 21 January 2014

ದಶಮಾಂಶ ಪದ್ದತಿ

ದಶಮಾಂಶ ಪದ್ದತಿ ಬಗ್ಗೆ ನಮಗೆ ಎಷ್ಟು ಗೊತ್ತು! ಈ ಶ್ಲೋಕವು ಬ್ರಹ್ಮಾಂಡ ಪುರಾಣದಲ್ಲಿದೆ, ಎಂಬ ಮಾಹಿತಿ ಇದೆ.

 ಏಕಂ ದಶ ಶತಂ ಚೈವ ಸಹಸ್ರಮಯುತಂ ತಥಾ |
 ಲಕ್ಷಂ ನಿಯುತಂ ಚೈವ ಕೋಟಿರರ್ಭುದಮೇವ ಚ ||೧||

 ಅರ್ಥ:
 ಒಂದು, ಹತ್ತು, ನೂರು, ಸಾವಿರ,ಹತ್ತು ಸಾವಿರ,ಲಕ್ಷ, ಹತ್ತು ಲಕ್ಷ ಮತ್ತು ಕೋಟಿ ಹೀಗೆಯೇ ಹತ್ತು ಕೋಟಿ

ವೃಂಧ: ಖರ್ವೋ ನಿಖರ್ವಶ್ಚ ಶಂಖ: ಪದ್ಮಂ ಚ ಸಾಗರ: |
ಅಂತ್ಯಂ ಮಧ್ಯಂ ಪರಾರ್ದ್ಧ್ಯಂ ಚ ದಶವೃದ್ಧ್ಯಾ ಯಥಾ ಕ್ರಮಮ್ ||೨||
ಅರ್ಥ:
ವೃಂದ, ಖರ್ವ,ನಿಖರ್ವ,ಶಂಖ, ಪದ್ಮ, ಸಾಗರ, ಅಂತ್ಯ, ಮಧ್ಯ ಮತ್ತು ಪರಾರ್ಧ್ಯ. ಹೀಗೆ ಯಥಾಕ್ರಮವಾಗಿ ಹತ್ತರಿಂದ ಗುಣಿಸಿ ವೃದ್ಧಿಯನ್ನು ಮಾಡಿಕೊಳ್ಳಬೇಕು.

ಅಂದರೆ
ಒಂದು= 1
ಹತ್ತು = 10
ನೂರು = 100
ಸಾವಿರ = 1000
ಹತ್ತು ಸಾವಿರ = 10,000
ಲಕ್ಷ = 1,00,000
ಹತ್ತು ಲಕ್ಷ = 10,00,000
ಕೋಟಿ = 1,00,00,000
ಹತ್ತು ಕೋಟಿ = 10,00,00,000
ವೃಂದ = ನೂರು ಕೋಟಿ = 100,00,00,000
ಖರ್ವ = ಸಾವಿರ ಕೋಟಿ = 1,000,00,00,000
ನಿಖರ್ವ = ಹತ್ತು ಸಾವಿರ ಕೋಟಿ = 10,000,00,00,000
ಶಂಖ = ಲಕ್ಷ ಕೋಟಿ = 1,00,000,00,00,000
ಪದ್ಮ = ಹತ್ತು ಲಕ್ಷ ಕೋಟಿ = 10,00,000,00,00,000
ಸಾಗರ = ಕೋಟಿ ಕೋಟಿ = 1,00,00,000,00,00,000
ಅಂತ್ಯ = ಹತ್ತು ಕೋಟಿ ಕೋಟಿ = 10,00,00,000,00,00,000
ಮಧ್ಯ = ನೂರು ಕೋಟಿ ಕೋಟಿ = 100,0000,000,00,00,000
ಪರಾರ್ಧ್ಯ = ಸಾವಿರ ಕೋಟಿ ಕೋಟಿ = 1,000,00,00,000,00,00,000

1 ರ ಪಕ್ಕ 17 ಸೊನ್ನೆಗಳಿಗೆ ನಿಂತಿದೆ. ಇನ್ನೂ ಮುಂದೂ ಇದೆಯೆಂದು ತಿಳಿದಿದೆ.ವಿವರ ನನಗೆ ಲಭ್ಯವಿಲ್ಲ.

ಗೆಳೆಯ ಗಣೇಶ್  ಅವರು ವಿಕಿಪಿಡಿಯಾದಲ್ಲಿನ ಮಾಹಿತಿ ಒದಗಿಸಿದ್ದಾರೆ. ಅದನ್ನು ಕೆಳಗೆ ಪ್ರಕಟಿಸಿರುವೆ. ಅದರಲ್ಲಿ Short schale and Long Schale ಎಂಬ ಎರಡು ಪಟ್ಟಿ ಇದೆ. ಈ ಬಗ್ಗೆ ಸರಿಯಾದ ವಿವರಣೆ ಯಾರಾದರೂ ಕೊಟ್ಟರೆ ಉಪಯೋಗವಾಗುತ್ತದೆ.


Name
Short scale
(U.S., Canada and
modern British)
Long scale
(continental Europe,
older British)
106
106

109

109
1012

1012
1018

1015
1024

Quintillion
1018
1030

Sextillion
1021
1036

Septillion
1024
1042

Octillion
1027
1048

Nonillion
1030
1054

Decillion
1033
1060

Undecillion
1036
1066

Duodecillion
1039
1072

Tredecillion
1042
1078

Quattuordecillion
1045
1084

Quindecillion (Quinquadecillion)
1048
1090

Sexdecillion (Sedecillion)
1051
1096

Septendecillion
1054
10102

Octodecillion
1057
10108

Novemdecillion (Novendecillion)
1060
10114

Vigintillion
1063
10120

10303
10600


ಕೃಪೆ: ವಿಕಿಪಿಡಿಯ


Wednesday 15 January 2014

ಸಂಪಾದಕೀಯ

 ಕಳೆದ ಕೆಲವಾರು ತಿಂಗಳುಗಳಿಂದ ಕೆಲಸಗಳ ಒತ್ತಡವೂ ಒಂದು ಕಾರಣವಿರಬಹುದು, ಅಂತೂ ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಹಾಗಾಗಿ ನನ್ನ ವೇದಸುಧೆ ತಾಣವನ್ನು ಅಪ್ ಡೇಟ್ ಮಾಡಲು ಸಾಧ್ಯವಾಗಿಲ್ಲ . ಈಗ ತಾಣವನ್ನು ರಿನ್ಯೂ ಮಾಡುವ ಸಮಯ ಬಂದಿದೆ. ಒಮ್ಮೆ ಹೀಗೇ ಯೋಚಿಸಿದೆ " ಯಾಕಾಗಿ ಇಷ್ಟೆಲ್ಲಾ ಕಷ್ಟಪಡಬೇಕು?" ಜನರಿಗೆ ವೇದದಲ್ಲಿ ಆಸಕ್ತಿ ಕಡಿಮೆ. ನನ್ನ ಶ್ರಮಕ್ಕೆ ತಕ್ಕಂತೆ ಓದುಗರು ಇದ್ದರೆ, ಅದರ ಪ್ರಯೋಜನ ವಾದರೆ, ಪರವಾಗಿಲ್ಲ, ಇಲ್ಲವಾದರೆ! ವೇಸ್ಟ್ ಅಲ್ಲವೇ? ಎಂದು ಯೋಚಿಸುತ್ತಿರುವಾಗಲೇ ಉಡುಪಿಯ ಸಮೀಪದ ಹೊನ್ನಾಳದ ನವೀನ್ ಎಂಬ ಯುವಕನೊಬ್ಬ ಅದ್ಭುತವಾದ ಪತ್ರ ಒಂದನ್ನು ಬರೆದಿದ್ದಾನೆ. ಅದನ್ನು ನೋಡಿದ ಮೇಲೆ ಸಾವಿರ ಜನರು ಓದಿದರೆ ಆಗುವಷ್ಟು  ಸಮಾಧಾನವಾಯ್ತು. ಹಾಗಾಗಿ ಜವಾಬ್ಧಾರಿ ಇನ್ನೂ ಹೆಚ್ಚಾಯ್ತು,ಎನಿಸಿತು.ಇನ್ನು ಸುಮ್ಮನಿರಲು ಸಾಧ್ಯವೇ! ಆ ತರುಣನ ಪತ್ರವನ್ನು ನೀವೂ ಓದಿ.

Naveen Honnala
ಶ್ರೀ ಶ್ರೀಧರ್ ಜಿ,
ನಾನು ಹೆಚ್ಚು ಕಡಿಮೆ ಎಲ್ಲಾ ಆಡಿಯೋಗಳನ್ನು ಕೇಳಿ ಆಗಿದೆ. ಬ್ಲಾಗ್ ನಲ್ಲಿ ಡೌನ್ ಲೋಡ್ ಆಗಬಹುದಾದಂತ ಎಲ್ಲಾ ಆಡಿಯೋಗಳನ್ನು ನಾನು save ಮಾಡಿಕೊಂಡಿರುತ್ತೇನೆ ಮತ್ತು ನನಗೆ ಪ್ರಶ್ನೆಗಳು ಮೂಡಿದಾಗ ಅದನ್ನು ಪುನಹ ಕೇಳುತ್ತಿರುತ್ತೇನೆ. ನನ್ನ ಗೆಳೆಯರಿಗೂ vedasudhe blog ಬಗ್ಗೆ ತಿಳಿಸಿದ್ದೇನೆ ಮತ್ತು ನನ್ನಲ್ಲಿರುವ ಆಡಿಯೋಗಳನ್ನು ನೀಡಿರುತ್ತೇನೆ. ಸುಧಾಕರ ಶರ್ಮರ ಮಾತುಗಳಿಂದ ಅನೇಕ ಗೊಂದಲಗಳ ಪರಿಹಾರವಾಗಿವೆ.
ಸುಮಾರು ಒಂದು ವರ್ಷದ ಹಿಂದೆ ಕುಟುಂಬದಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರುಗೊಂಡಿತ್ತು. ಭಗವದ್ಗೀತೆಯಿಂದಲೂ ಉತ್ತರ ಸಿಕ್ಕಿರಲಿಲ್ಲ. ಹೀಗೆ ತಡಕಾಡುತ್ತಿರುವಾಗ ನಿಮ್ಮ blog ನ್ನು ಪ್ರವೇಶಿಸಿದೆ. ಅಲ್ಲಿಂದ ನನ್ನ ಜೀವನದಲ್ಲೇ ಹೊಸ ಬದಲಾವಣೆ ಉಂಟಾಗಿದೆ. ಮನೆಯ ಎಲ್ಲಾ ಸಮಸ್ಯೆಗಳನ್ನು ಖುದ್ದು ನಾನೇ ನಿಂತು ಪರಿಹರಿಸಿದೆ, ವಯಸ್ಸಿನಲ್ಲಿ ಚಿಕ್ಕವನಾದರೂ ಎಲ್ಲರೂ ನನ್ನ ಮಾತು ಕೇಳುವಂತೆ ಮಾಡಲು, ವೇದಸುಧೆ ಮತ್ತು ಸುಧಾಕರ ಶರ್ಮರ ಕೃಪೆಯಿಂದ ಸಾಧ್ಯವಾಯಿತು. ತುಂಬಾ ದಿನಗಳಿಂದ ಶರ್ಮರವರ ಆಡಿಯೋ ಸಿಗುತ್ತಿಲ್ಲ. ಹಿಂದನ್ನದೆಲ್ಲವನ್ನು ಕೇಳಿರುತ್ತೇನೆ. ಅದಕ್ಕಾಗಿಯೇ ಪುಸ್ತಕವನ್ನು ಕೇಳಿದ್ದು. ಶರ್ಮರ ಪುಸ್ತಕ ಲಭ್ಯವಿಲ್ಲದ ಪಕ್ಷದಲ್ಲಿ ನಿಮ್ಮ ವೇದಸುಧೆಯ ವಾರಪತ್ರಿಕೆ, ಮಾಸಪತ್ರಿಕೆ ಅಥವಾ ಇನ್ನಿತರ ಯಾವುದೇ ಪುಸ್ತಕ ಕಳುಹಿಸಿ ಕೊಡಿ. ನಾನು ಚಂದಾಧಾರನಾಗ ಬಯಸುತ್ತೇನೆ. ಆರ್ಥಿಕವಾಗಿ ಮನೆಯವರು ಹೆಚ್ಚಾಗಿ ನನ್ನನ್ನು ಅವಲಂಬಿಸಿರುವುದರಿಂದ ಮತ್ತು ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ ರಜೆ ಹಾಕಿ ಬರಲು ಸ್ವಲ್ಪ ಕಷ್ಟ ಸಾಧ್ಯ. ದಯವಿಟ್ಟು ಈ ಬಗ್ಗೆ ಸ್ವಲ್ಪ ವಿಶೆಷವಾಗಿ ಗಮನಹರಿಸಿ. ನನ್ನ ಸಮಸ್ಯೆಗಳ ಒತ್ತಡ ಸ್ವಲ್ಪ ಕಡಿಮಿಯಾದ ಕೂಡಲೇ ನಾನು ಹಾಸನಕ್ಕೆ ಬಂದು ಶಿಬಿರದಲ್ಲಿ ಪಾಲ್ಗೊಳ್ಳುವ ಬಯಕೆ ಹೊಂದಿರುತ್ತೇನೆ.  ಕುಳಿತ ಸ್ಥಳದಲ್ಲೇ ವೇದ ಜ್ಞಾನವನ್ನು ನೀಡಿ ಬದುಕಿನ ದಾರಿ ಕಂಡು ಕೊಳ್ಳುವಲ್ಲಿ ಸಹಾಯ ಮಾಡಿದ ವೇದಸುಧೆಗೆ  ನನ್ನ ನಮನ.

Monday 13 January 2014

ವೇದಭಾರತೀ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ

ಅಗ್ನಿಹೋತ್ರ

ಪುಷ್ಪಾರ್ಚನೆ

ಶ್ರೀ ಮತೀ ಪ್ರೇಮಾ ಅವರಿಂದ ಸ್ವಾಗತ ಪರಿಚಯ

ಶ್ರೀಮತೀ ಕಲಾವತಿಯವರಿಂದ ವರದಿ ವಾಚನ

RSS ನಗರ ಸಂಘಚಾಲಕರಾದ ಶ್ರೀ ಪಾರಸ್ ಮಲ್



ಸ್ವಾಮೀಜಿ ಯುಕ್ತೇಶಾನಂದಜಿ ಮಹಾರಾಜ್ ಅವರಿಂದ ಉಪನ್ಯಾಸ

ಸಂಸ್ಕೃತ ಭಾಷೆಯಲ್ಲಿ ಕಾರ್ಯಕ್ರಮವನ್ನು ನಿರೂಪಿಸಿದ ಶ್ರೀ ಬೈರಪ್ಪಾಜಿ

ಅಮೋಘ್ ವಾಹಿನಿಯ ಮುಖ್ಯ ಸಂಪಾದಕರಾದ ಶ್ರೀ ಪ್ರಮೋದ್ ಅವರಿಂದ ಭಾಷಣ

ಅಧ್ಯಕ್ಷರ ನುಡಿ ಶ್ರೀ ಕವಿ ನಾಗರಾಜ್ ಅವರಿಂದ

ಶ್ರೀ ಅಶೋಕ್ ಕುಮಾರ್ ಅವರಿಂದ ಧನ್ಯವಾದ ಸಮರ್ಪಣೆ



ಈಕೊಂಡಿಯಲ್ಲಿ ಸ್ವಾಮೀಜಿಯವರ ಉಪನ್ಯಾಸವನ್ನು ಕೇಳಬಹುದು


Wednesday 8 January 2014

ಸ್ವಾಮಿ ವಿವೇಕಾನಂದ ಜಯಂತಿ

ವೇದಭಾರತೀ, ಹಾಸನ
ಸ್ವಾಮಿ ವಿವೇಕಾನಂದ ಜಯಂತಿ

ಸ್ಥಳ:ಈಶಾವಾಸ್ಯಮ್, ಶಕ್ತಿಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ,ಹಾಸನ
ದಿನಾಂಕ: ೧೨.೧.೨೦೧೪ ಭಾನುವಾರ ಸಂಜೆ ೫.೩೦ ರಿಂದ
ಅಗ್ನಿಹೋತ್ರ 
ವಿವೇಕಾನಂದ ಚಿಂತನ ಗೋಷ್ಠಿ
ಮುಖ್ಯ ಉಪನ್ಯಾಸ

ಪೂಜ್ಯ ಶ್ರೀಯುಕ್ತೇಶಾನಂದಜಿ ಮಹಾರಾಜ್
ಶ್ರೀ ರಾಮಕೃಷ್ನ ಶಾರದಾಶ್ರಮ,ಪೊನ್ನಮ್ ಪೇಟೆ

ಅಧ್ಯಕ್ಷತೆ:
ಶ್ರೀ ಕವಿ ನಾಗರಾಜ್,
ಅಧ್ಯಕ್ಷರು, ವೇದಭಾರತೀ,ಹಾಸನ

ಮುಖ್ಯ ಅತಿಥಿಗಳು:
ಶ್ರೀ ಸಿ.ಎಸ್.ಕೃಷ್ಣಸ್ವಾಮಿ
ಪ್ರಾಂಶುಪಾಲರು, ಶ್ರೀರಾಮಕೃಷ್ಣವಿದ್ಯಾಲಯ,ಹಾಸನ
ಶ್ರೀ ಕೆ.ಪಿ.ಎಸ್.ಪ್ರಮೋದ್
ಪ್ರಧಾನ ಸಂಪಾದಕರು, ಅಮೋಘ್ ವಾಹಿನಿ, ಹಾಸನ, ಮತ್ತು
ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಡಾ|| ಜನಾರ್ಧನ್
ಅಧ್ಯಕ್ಷರು,ಕನ್ನಡಸಾಹಿತ್ಯ ಪರಿಷತ್ತು,.ಹಾಸನ ಮತ್ತು
ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಶ್ರೀ ಪಾರಸ್ ಮಲ್
ನಗರ ಸಂಘಚಾಲಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಸನ
ಡಾ|| ಗುರುರಾಜ ಹೆಬ್ಬಾರ್
ಸಮಾಜ ಸೇವಕರು, ಶ್ರೀರಾಮಕೃಷ್ಣ ನರ್ಸಿಂಗ್ ಹೋಮ್, ಹಾಸನ

ಸರ್ವರಿಗೂ ಆದರದ ಸ್ವಾಗತ
ಚಿನ್ನಪ್ಪ
ಕಾರ್ಯದರ್ಶಿ,ವೇದಭಾರತೀ, ಹಾಸನ
--------------------------------------------------------------------------------------------
ಪ್ರತಿದಿನ  ಸಂಜೆ ೬.೦೦ ರಿಂದ ೭.೦೦ ರ ವರಗೆ ಈಶಾವಾಸ್ಯಮ್ ನಲ್ಲಿ  ನಡೆಯುತ್ತಿರುವ ಎಲ್ಲರಿಗಾಗಿ ವೇದ  ಉಚಿತ ವೇದಪಾಠ, ಅಗ್ನಿಹೋತ್ರ ಮತ್ತು ಸಂಸ್ಕೃತ ಕಲಿಕಾ ತರಗತಿಗಳಿಗೆ ಸೇರಲು ಮುಕ್ತ ಅವಕಾಶವಿದೆ
Visit:  vedasudhe.com      Mail: vedasudhe@gmail.com
ಮಾಹಿತಿಗಾಗಿ  ಸಂಪರ್ಕಿಸಿ:    9663572406

Sunday 5 January 2014

ಜೀವನ ವೇದ-1


           ಎಲ್ಲರೂ ಕಷ್ಟ ಪಡುವುದೇ ಮುಂದಿನ ಸುಖದ ಜೀವನಕ್ಕಾಗಿ- ಎಂಬುದು ಸಾಮಾನ್ಯ ಅಭಿಪ್ರಾಯ.  ನೀನು ಹೇಗಿದ್ದೀಯಾ? ಎಂದು ಕೇಳಿದರೆ, ಸಂತೋಷವಾಗಿದ್ದೀನಿ, ಎನ್ನುವವರು ಎಷ್ಟು ಮಂದಿ? ಆತ್ಮೀಯರು ಯಾರಾದರೂ ಎದುರಿಗೆ ಸಿಕ್ಕಿದರೆ ಸಾಕು  ತಮ್ಮ ಜೀವನದ ಕಷ್ಟಗಳನ್ನು ಹೇಳಿಕೊಳ್ಳುವವರೇ ಹೆಚ್ಚು. ತಮಾಶೆ ಎಂದರೆ ಹೀಗೆ ಹೇಳಿಕೊಳ್ಳುವುದರಿಂದ ಕೇಳಿಸಿಕೊಂಡವನು ಇವನಿಗೆ ಏನೂ ಸಹಾಯಮಾಡಲಾರ, ಎಂಬ ಸತ್ಯವು ಹೇಳಿಕೊಂಡವನಿಗೂ ಗೊತ್ತು.ಆದರೂ ಇಂತಾ ಒಂದು ವ್ಯರ್ಥ ಪ್ರಲಾಪಗಳು ಇದ್ದದ್ದೇ. ಹೇಳಿಕೊಂಡವನಿಗೆ ಏನೋ ಒಂದು ರೀತಿಯ ಹಗುರವಾದ ಭಾವ. ಕೇಳುವವನಿಗೆ ತಾಳ್ಮೆ ಬೇಕು , ಅಷ್ಟೆ.ಇನ್ನೂ ದೊಡ್ಡ ತಮಾಶೆ  ಎಂದರೆ ಕೇಳಿಸಿಕೊಂಡವನ ಸಮಸ್ಯೆ ಹೇಳಿಕೊಂಡವನಿಗಿಂತ ಹೆಚ್ಚಿರಲೂ ಬಹುದು.
 ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು  ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅ೦ತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ  ಬರಬೇಕೇ? ಅಧ್ಯಾತ್ಮ ಚಿಂತನೆ  ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ?
ಸ್ವರ್ಗ ಎಲ್ಲಿದೆ? 
ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು  ನಿತ್ಯ ನರಕವಾಗಿ  ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ?ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು  ಕೆಲವು ಜೀವನ ಸೂತ್ರಗಳನ್ನು  ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ.
ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ಕಾರ್ಯಕ್ರಮವಿರುತ್ತದೆ. ಪುರೋಹಿತರು ಏನೋ ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಮದುವೆಗೆ ಬಂದವರೆಲ್ಲಾ ಹರಟೆಹೊಡೆಯುತ್ತಿರುತ್ತಾರೆ. ಕ್ಯಾಮರಾಮನ್ ಮಾತ್ರ ಚಿತ್ರೀಕರಣವನ್ನು ಮಾಡಲು ಸಾಹಸ ಪಡುತ್ತಿರುತ್ತಾನೆ. ಚಿತ್ರೀಕರಣವಾದರೂ ಯಾಕಾಗಿ? ಮದುವೆ ಮುಗಿದಮೇಲೆ ಮನೆಗೆ ಬಂದ ಬಂಧುಬಳಗಕ್ಕೆ ಒಂದಿಷ್ಟು ದಿನ ವೀಡಿಯೋ ತೋರಿಸಿ ಕೊನೆಗೆ ವೀಡಿಯೋ ಸಿ.ಡಿ ಯಾವುದೋ ಜಾಗ ಸೇರಿದರೆ ಮುಗಿಯಿತು. ಅಷ್ಟೆ. ಆದರೆ ಜೀವನಕ್ಕೆ ಈ ಕಾರ್ಯಕ್ರಮದಿಂದ ವಧು-ವರರು ಏನಾದರೂ ಉಪಯೋಗ ಮಾಡಿಕೊಂಡರೇ? ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
ಸಖೇ ಸಪ್ತಪದೀ ಭವ 
ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ  ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತೂ? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ.
ಸಖೇ ಸಪ್ತಪದೀ ಭವ  ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ    ನೂರಾರು ಜನರು ಸಾಕ್ಷಿಯಾಗಿದ್ದಾರೆ,ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ?
         ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳನ್ನು ಟಿ.ವಿ. ಮಾಧ್ಯಮಗಳಲ್ಲಿ ಮಾಡುತ್ತಾರೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ?
ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು ,ಅಲ್ವಾ?  ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ?
ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ  ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ.
ಜಾತಕದ ವಿಚಾರದಲ್ಲಿ ನನ್ನ ಸ್ವಂತ ಅನುಭವ ಹೇಳಿಬಿಡುವೆ.ನಮ್ಮ ದೂರದ ಸಂಬಂಧಿಯನ್ನು ನಾನು ಮದುವೆಯಾಗಬೇಕೆಂಬ ಸಲಹೆ ಬಂತು. ಒಪ್ಪಿ ಮದುವೆಯಾಗುವುದೆಂದು ತೀರ್ಮಾನವೂ ಆಯ್ತು. ನಿಶ್ಚಿತಾರ್ಥದ ದಿನ ಲಗ್ನ ಪತ್ರಿಕೆ ಬರೆಯಲು ಪುರೋಹಿತರು ಜಾತಕ ಕೇಳುತ್ತಾರೆ. ಹೆಣ್ಣಿನ ಜಾತಕ ಬಂತು. ಗಂಡಿನ ಜಾತಕವೇ ಇಲ್ಲ. ಹುಡುಗಿಯ ಅಣ್ಣ ಮತ್ತು ನಾನು ಒಂದು ದಿನದ ಅಂತರದಲ್ಲಿ ಹುಟ್ಟಿದ್ದೆವು. ಇದು ಎರಡೂ ಮನೆಗೆ ಗೊತ್ತಿದ್ದ ವಿಚಾರ.ಹುಡುಗಿ ಅಣ್ಣನ ಜಾತಕ ತರಿಸಿದ್ದಾಯ್ತು. ಅವನು ಹುಟ್ಟಿದ್ದು ಶನಿವಾರ. ನಾನು ಶುಕ್ರವಾರ ಮಧ್ಯಾಹ್ನ ೨.೦೦ ಗಂಟೆಗೆ. ಪುರೋಹಿತರು ಸ್ಥಳದಲ್ಲೇ ನನ್ನ ಜಾತಕ ಬರೆದದ್ದಾಯ್ತು. ತಾಳೆ ಹಾಕುತ್ತಾರೆ. ಇಲ್ಲ,ಇಲ್ಲ, ಜಾತಕ ಹೊಂದಾಣಿಗೆ ಆಗುವುದೇ ಇಲ್ಲ ಪುರೋಹಿತರು ತೀರ್ಮಾನ ಕೊಟ್ಟೇ ಬಿಟ್ಟರು. ಅವರನ್ನು ಅಲ್ಲೇ ಕೊಂದುಬಿಡಲೇ  ಎಂಬ ಸಿಟ್ಟು ನನಗೆ. ಸರಿಯಾಗಿ ನೋಡಿ ಪುರೋಹಿತರೇ  ಎಂದು ನಮ್ಮ ತಾಯಿ ಹೇಳಿದರು.ಆ ಪುರೋಹಿತರೋ ಮಧ್ಯಾಹ್ನ ೨.೦೦ ಗಂಟೆಯ ಬದಲು ಹಿಂದಿನ ರಾತ್ರಿ ೨.೦೦ ಗಂಟೆಯನ್ನು ಗಣನೆಗೆ ತೆಗೆದುಕೊಂಡು ಜಾತಕ ಬರೆದಿದ್ದರು. ನಮ್ಮ ತಾಯಿ ಹೇಳಿದ ಮೇಲೆ ಮತ್ತೊಮ್ಮೆ ಬರೆದು ಜಾತಕ ತಾಳೆ ಮಾಡಿದರು ಓಹ್ ಶ್ರೀರಾಮ ಚಂದ್ರ- ಸೀತಾದೇವಿಯ ಜಾತಕ ಇದ್ದಂತೆ ಇದೆ. ಏನೂ ಯೋಚಿಸದೆ ಮದುವೆ ಮಾಡಬಹುದು ಎಂದರು.
ಎಷ್ಟೋ ಹುಡುಗಿಯರ ಮದುವೆ ವಯಸ್ಸಿಗೆ ಸರಿಯಾಗಿ ಆಗದೆ ಸುಳ್ಳು ಜಾತಕ ಬರೆಸಿ ಮದುವೆ ಮಾಡಿರುವ ಹಲವು ಉಧಾಹರಣೆಗಳನ್ನು ಬಲ್ಲೆ. ಹೀಗಾಗಬೇಕೇ? ಜಾತಕದ ವಿಷಯ ಹಾಗಿರಲಿ.

ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.
ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ|
[ಕಾಂಡ ೧೪ ಸೂಕ್ತ ೨ ಮಂತ್ರ ೬೪]
ಅರ್ಥ: ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ.
ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು.
ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ  ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ  ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು  ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು  ಹೇಗೆ ಜೀವನವನ್ನು  ನಿರ್ವಹಿಸಬೇಕೆಂದು ವೇದವು ನಮ್ಮನ್ನು ಸದಾಕಾಲ ಜಾಗೃತ ಸ್ಥಿತಿಯಲ್ಲೂ ಇಡುತ್ತದೆ.
ಮಹಾಭಾರತದ ಶಾಂತಿಪರ್ವದಲ್ಲಿ ಪತ್ನಿಯ ಬಗ್ಗೆ ಎಷ್ಟು ಅದ್ಭುತ ವರ್ಣನೆ  ಇದೆ ನೋಡಿ.. . . . .
ನಾಸ್ತಿ ಭಾರ್ಯಾಸಮೋ ಬಂಧು: 
ಪತ್ನಿಗಿಂತ ಮಿಗಿಲಾದ ಮಿತ್ರರು/ಬಂಧು ಯಾರೂ ಇಲ್ಲ. ಇದಕ್ಕಿಂತ ಅದ್ಭುತವಾದ ಮಾತು ಬೇಕೇ? ಪತ್ನಿಗೆ ಪತಿ, ಪತಿಗೆಪತ್ನಿಯ ಹತ್ತಿರದ ಬಾಂಧವ್ಯದಷ್ಟು ಬೇರೆ ಯಾರಾದರೂ ಇರಲು ಸಾಧ್ಯವೇ? ಮಗನಿಗೆ ಮದುವೆಯಾಯ್ತು.ಪತ್ನಿಯ ಕೈಗೊಂಬೆಯಾದ.-ಇದು ಸಾಮಾನ್ಯವಾಗಿ ತಾಯಿಯ ಬಾಯಲ್ಲಿ ಕೇಳುವ ಮಾತು. ಹೆತ್ತ ಮಗನ ಮೇಲಿನ ವ್ಯಾಮೋಹದಿಂದ ತಾಯಿಯ ಬುದ್ಧಿ ಎಷ್ಟು ದುರ್ಬಲವಾಗಿರುತ್ತದೆಂದರೆ ಹಲವು ಮನೆಗಳಲ್ಲಿ ಇಂತಹ ಕೆಟ್ಟ ಸ್ಥಿತಿಯನ್ನು ನಾವು ನೋಡುತ್ತೇವೆ.
ಮಗನ ಸಂಸಾರ ಚೆನ್ನಾಗಿರಬೇಕೆಂಬ ಆಸೆ ಹೆತ್ತ ತಾಯಿಗೆ ಇಲ್ಲವೇ? ಇರುತ್ತದೆ. ಆದರೆ ಹೆತ್ತಮ್ಮನಿಗೆ ಎಂತಹ ವ್ಯಾಮೋಹದ ಮುಸುಕು ಆವರಿಸಿರುತ್ತದೆಂದರೆ ಎಲ್ಲಿ ನನ್ನ ಮಗ ನನ್ನ ಕೈಬಿಟ್ಟು ಹೋಗುತ್ತಾನೋ, ಎಂಬ ಚಿಂತೆಯಲ್ಲಿ ಮಗನ ದಾಂಪತ್ಯದ ಬಗ್ಗೆ  ಸರಿಯಾಗಿ ಯೋಚಿಸುವುದೇ ಇಲ್ಲ. ಮಗನು ಸದಾ ತನ್ನ ಕಣ್ಮುಂದಿರಬೇಕು. ಪತ್ನಿಯೊಡನೆ ವಾಯು ವಿಹಾರಕ್ಕೆ ತೆರಳಿದರೂ ಅವಳ ಬಗ್ಗೆ ಸಂಶಯ.  ಸೊಸೆಯು ಎಲ್ಲಿ ತನ್ನ ಮೆಲೆ ಇಲ್ಲ ಸಲ್ಲದ ಚಾಡಿ ಹೇಳಿಬಿಡುತ್ತಾಳೋ ಎಂಬ ಅನುಮಾನ. ಸಹಜವಾಗಿ ಪತಿಪತ್ನಿ ಏಕಾಂತದಲ್ಲಿರುವಾಗ ನೋವು-ನಲಿವುಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆಗೆಲ್ಲಾ ಅತ್ತೆ-ಸೊಸೆಯರಲ್ಲಿ  ಸಣ್ಣದಾಗಿ ಶುರುವಾದ  ಬಿರುಕು ದೊಡ್ದದಾಗಿ ಬೇರೆ ಮನೆಯನ್ನು ಮಾಡುವ ವರೆಗೂ ತಲುಪುತ್ತದೆ. ನಾಸ್ತಿ ಭಾರ್ಯಾಸಮೋ ಬಂಧು: ಎಂಬ ವಿಚಾರ ಪತಿಗೆ ಅಷ್ಟೇ ಅಲ್ಲ ಪತಿಯ ಅಪ್ಪ-ಅಮ್ಮನಿಗೆ , ಅಣ್ಣ ತಮ್ಮ ಅಕ್ಕ-ತಂಗಿಯರಿಗೆ ತಿಳಿದಿರಬೇಕು. ಕಾರಣ ಈ ಸತ್ಯವನ್ನು ಅವರವರ ಜೀವನದಲ್ಲಿ ಎಲ್ಲರೂ ಒಪ್ಪಿಕೊಂಡಾಗ ಎಲ್ಲರ ಸಂಸಾರವೂ ಸುಂದರ ಅಲ್ಲವೇ? ಸುಂದರ ದಾಂಪತ್ಯದ ಬಗ್ಗೆ ಮುಂದಿನ ವಾರ ಮತ್ತಷ್ಟು ಅಂಶಗಳನ್ನು ನೋಡೋಣ.