ಯಾರೊಬ್ಬರ ಖಾಸಗೀ ಬದುಕಿನಲ್ಲೂ ಯಾರೂ ಮುಖತೂರಿಸುವಂತಿಲ್ಲ. ಅವರವರ ಬದುಕು ಅವರವರ ಚಿಂತನೆಯಂತೆ ಸಾಗುತ್ತದೆ.ಅದು ಅವರ ಸ್ವಾತಂತ್ರ್ಯ. ಆದರೆ ವೇದದ ವಿಚಾರ ಮಾತಾಡುವಾಗ ಯಾರ ಸ್ವಾತಂತ್ರ್ಯಕ್ಕೂ ಧಕ್ಕೆ ಮಾಡುವುದಕ್ಕಲ್ಲ, ಬದಲಿಗೆ ಜೀವನದ ಉತ್ಕೃಷ್ಟಯ ಬಗ್ಗೆ ಅರಿವು ಹೆಚ್ಚಾಗಲು ಬಾಗಿಲು ತೆರೆದುಕೊಳ್ಳುವ ಅವಕಾಶ. ನಮ್ಮ ಆತ್ಮೋನ್ನತಿಗೆ ಅವಕಾಶ ಲಭ್ಯವಾಗುತ್ತದೆ. ಆದ್ದರಿಂದ ವೇದದ ವಿಚಾರ ಬಂದಾಗ ಅದು ಉತ್ತಮವಾದ ಜೀವನಕ್ಕೆ ನೆರವು ನೀಡುವ ಜ್ಞಾನವೇ ಹೊರತೂ ಎಲ್ಲಾ ಪದ್ದತಿಗಳಂತೆ ಅದೊಂದು ಪದ್ದತಿಯೆಂದು ಭಾವಿಸುವ ಅಗತ್ಯವಿಲ್ಲ.
ಸಾವಿರಾರು ವರ್ಷಗಳು ನಾವು ದಾಸ್ಯಕ್ಕೊಳಗಾಗಿದ್ದೆವು. ಆ ಸಂದರ್ಭದಲ್ಲಿ ವೈದಿಕ ಮಾರ್ಗವು ಕ್ರಮೇಣ ನಶಿಸಿ ಈಗಿರುವ ಎಡಬಿಡಂಗಿ ಹಂತವನ್ನು ತಲುಪಿದ್ದಾಗಿದೆ. ವೇದವನ್ನು ಬಿಡಲಾರೆವು. ಆಚರಣೆಯಲ್ಲಿರುವ ಸಂಪ್ರದಾಯ ಬಿಡಲಾರೆವು.ಎಲ್ಲವನ್ನೂ ಸೇರಿಸಿ " ನಮ್ಮ ವೇದ, ಪುರಾಣ, ಸಂಪ್ರದಾಯ" ಎಲ್ಲಾ ಪದವನ್ನೂ ಒಂದೇ ತಕ್ಕಡಿಯಲ್ಲಿ ತೂಗಿನೋಡುವ ಪ್ರಯತ್ನವನ್ನು ಮಾಡುತ್ತೇವೆ. ವೇದವನ್ನು ಸರಳವಾಗಿ ಅರ್ಥೈಸಲು ಪುರಾಣದ ಕಥೆಗಳನ್ನು ಬರೆದೆವು. ಅವುಗಳಲ್ಲಿ ಇಂದಿಗೆ ಎಷ್ಟು ಬೇಕು, ಎಷ್ಟು ಬೇಡ ಎಂಬುದು ಗೊತ್ತಾಗದೇ ಸಂಶಯಗ್ರಸ್ತರಾಗಿ ಉಳಿದೆವು. ಆದರೆ ವೇದದ ಚಿಂತನೆ ಎಂದರೆ ಅಂದಿಗೂ. ಇಂದಿಗೂ , ಎಂದೆಂದಿಗೂ ಹೊಂದುವ ವಾಸ್ತವ ಸತ್ಯಗಳು.ಅವು ಕಟ್ಟು ಕಥೆಗಳಲ್ಲ. ಬೆಂಕಿಯು ಯಾವ ಕಾಲದಲ್ಲೂ, ಯಾವ ಪ್ರದೇಶದಲ್ಲೂ ಹಾಗೂ ಯಾರೂ ಮುಟ್ಟಿದರೆ ಸುಡುತ್ತದೆಂಬುದು ಎಷ್ಟು ಸತ್ಯವೋ ವೇದವು ಅಷ್ಟು ಸತ್ಯ. ಅಷ್ಟು ವೈಜ್ಞಾನಿಕ.
ಆದರೆ ಯಾವುದೋ ಕಾಲದಲ್ಲಿ ಅದರಲ್ಲೂ ಮೂಗು ತೂರಿವುವ ಪ್ರಯತ್ನಮಾಡಿ ವೇದವನ್ನು ಸರಿಯಾಗಿ ಅರ್ಥೈಸದೆ ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿದ್ದರ ಪರಿಣಾಮ ಈಗಿನ ಹಲವು ಆಪಾದನೆಗಳು ವೇದದ ಮೇಲೆ. ಆದರೆ ವೇದವನ್ನು ಯಾಸ್ಕರ ನಿರುಕ್ತದ ಆಧಾರದಲ್ಲಿ ಅರ್ಥೈಸಿದ್ದೇ ಆದರೆ ವೇದವು ನಮ್ಮ ಜೀವನವನ್ನು ಉನ್ನತಿಗೆ ಏರಿಸಬಲ್ಲದು. ಅಲ್ಲದೆ ಮಾನವೀಯತೆಗೆ ವಿರುದ್ಧವಾದ ಯಾವ ಅಂಶವೂ ವೇದದಲ್ಲಿ ಸಿಗಲಾರದು.
ಆದ್ದರಿಂದ ನಮ್ಮ ಸಂಪ್ರದಾಯಗಳು ಏನೇ ಇರಲಿ. ವೇದದ ಆಧಾರದಲ್ಲಿ ಅದರಲ್ಲಿ ಸತ್ಯವನ್ನು ಕಾಣುವ ಪ್ರಯತ್ನ ಮಾಡಿದಾಗ ಅಸತ್ಯವಾದ ಸಂಗತಿಗಳು, ಮಾನವೀಯ ವಿರೋಧಿ ಆಚರಣೆಗಳು ತಾನೇ ತಾನಾಗಿ ದೂರವಾಗುವುದರಲ್ಲಿ ಸಂದೇಹವಿಲ್ಲ. ಹಲವಾರು ವರ್ಷಗಳು ಶ್ರೀ ಸುಧಾಕರಶರ್ಮರ ವಾದವನ್ನು ಒಪ್ಪದೆ ಚರ್ಚೆ ಮಾಡಿದಮೇಲೆ ನನಗಂತೂ ವೇದವಲ್ಲದೆ ಬೇರೆ ದಾರಿ ಕಾಣುತ್ತಿಲ್ಲ. ವೇದವು ನನಗೆ ನಿರ್ಭಯತೆಯನ್ನು ನೀಡಿರುವುದರಲ್ಲಿ ಎರಡು ಮಾತಿಲ್ಲ. ಮನುಷ್ಯರಿಗೆ ದೇವರಲ್ಲಿ ಭಯ ಇರಬಾರದು.ಭಯವು ಮೌಢ್ಯಕ್ಕೆ ಎಡೆಮಾಡಿಕೊಡುತ್ತದೆ. ವೇದದ ಬೆಳಕಿನಲ್ಲಿ ನಮ್ಮ ಚಿಂತನೆಗಳು ಆರಂಭವಾದರೆ ನಿರ್ಭಯತೆ ,ಸ್ಪಷ್ಟತೆ ತಾನಾಗಿ ಲಭ್ಯವಾಗುತ್ತದೆ.
No comments:
Post a Comment