ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Thursday, 1 November 2012

ಕಲ್ಯಾಣಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ…..


ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ  ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ!  ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ  ಕಲಿಯುತ್ತಿರುವ ವಿದ್ಯಾರ್ಥಿಯು  ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.

ಇಂದಿನ ವೇದ ಮಂತ್ರದ ಬಗ್ಗೆ ಸ್ವಲ್ಪ ವಿಮರ್ಶೆ ಮಾಡೋಣ.
ಋಗ್ವೇದ ಮಂಡಲ: 5    ಸೂಕ್ತ: 55    ಮಂತ್ರ: 8

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||

ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ  = ಯಾವುದು ಪ್ರಾಚೀನವೋ    ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು 
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ  ಯಾತಾಂ  ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ:  ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ

ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ…

ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದಿನ ದಿನಗಳಲ್ಲಿ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

No comments:

Post a Comment