ಈ ಘಟನೆ ನಡೆದು ನಾಲ್ಕೈದು ವರ್ಷಗಳೇ ಕಳೆದಿವೆ. ಪೂಜಾಗೃಹದಲ್ಲಿ ದೇವರಿಗೆ ಅಭಿಶೇಕ ಮಾಡುತ್ತಿದ್ದೆ. ಪುಟ್ಟ ಪುಟ್ಟ ನಾಲ್ಕೈದು ಬೆಳ್ಳಿ ವಿಗ್ರಹಗಳು! ಅದೇಕೋ ಮನದಲ್ಲಿ ದುಸ್ಸೆಂದು ಒಂದು ವಿಚಾರ ಬರಬೇಕೇ!! “ಅಯ್ಯೋ ,ಇದೇನು ನಾನು ಮಕ್ಕಳಾಟ ಆಡ್ತಾ ಇದ್ದೀನಾ? ಇದ್ದಕ್ಕಿದ್ದಂತೆ ನನ್ನ ಬಾಲ್ಯದ ನೆನಪುಗಳೆಲ್ಲಾ ಕಣ್ಮುಂದೆ ಸುಳಿದಾಡಿದವು. ಸಮಾನ ವಯಸ್ಸಿನ ಬೇರೆ ಮಕ್ಕಳೊಡನೆ “ಅಮ್ಮನ ಆಟ” ಆಡುತ್ತಿದ್ದ ನೆನಪುಗಳು! ಹೆಣ್ಣು ಗಂಡು ಎಂಬ ಭೇದವಿಲ್ಲದೆ ನಾಲ್ಕೈದು ಮಕ್ಕಳನ್ನು ಒಟ್ಟುಗೂಡಿಸಿ “ಅವಳು ಅಮ್ಮ, ನಾನು ಅಪ್ಪ, ಇವನು ಮಗ,ಅವಳು ಮಗಳು” ಎಲ್ಲರಿಗೂ ನಾಮಕರಣ ಮಾಡಿ ಆಟ ಆರಂಭಮಾಡ್ತಾ ಇದ್ದ ಆ ದಿನದ ನೆನಪುಗಳು! ಅಪ್ಪ ಅಂದರೆ ಅಂಗಡಿಗೆ ಹೋಗಿ ಸಾಮಾನು ತರಬೇಕು, ತೋಟಕ್ಕೆ ಹೋಗಿ ಬರಬೇಕು, ಅಮ್ಮ ಮನೆ ಕೆಲಸ ಮಾಡಬೇಕು, ಅಡಿಗೆ ಮಾಡಬೇಕು………. ಎಲ್ಲ ಯಥಾಪ್ರಕಾರ ಸಂಸಾರವೇ. ಅವಳು ಹೆಂಡ್ತಿ, ನಾನು ಗಂಡ. ಮಗ-ಮಗಳು. ಮನೆ ಅಂದಮೇಲೆ ದೇವರ ಮನೆ [ಈಗ ಪೂಜಾ ಗೃಹ ಅಂತಾರೆ] ಇರಲೇ ಬೇಕಲ್ಲಾ! ನನ್ನ ಕೆಲಸ ಅಂದರೆ ಎಲ್ಲಕ್ಕಿಂತ ಹೆಚ್ಚಾಗಿ ದೇವರ ಪೂಜೆ ಮಾಡೋದು. ಮಕ್ಕಳು ನನಗೆ ಅಸ್ಸಿಸ್ಟ್ ಮಾಡಬೇಕು. ನಮ್ಮನೇಲೀ ಇದ್ದ ಆಟದ ಗೊಂಬೆಗೇ ಅಭಿಶೇಕ ಮಾಡಿ ಮಂಗಳಾರತೀ ಮಾಡಿ ಎಲ್ಲಾರಿಗೂ ಕೊಡುವಾಗ ಕಾಣುತ್ತಿದ್ದ ಧನ್ಯತೆಯ ಭಾವ !! ಪೂಜೆ ನಂತರ ತೀರ್ಥ ಪ್ರಸಾದವೂ ತಪ್ಪುತ್ತಿರಲಿಲ್ಲ.ಅಮ್ಮನ್ನ ಕಾಡಿಬೇಡಿ ಎರಡು ಬಾಳೆಹಣ್ಣು, ಒಂಚೂರು ತೆಂಗಿನಕಾಯಿ, ಸ್ವಲ್ಪಾ ಹಾಲು, ಮೊಸರು, ಒಂಚೂರು ಬೆಲ್ಲ ಎಲ್ಲಾ ತಗೊಂಡು ಬರುತ್ತಿದ್ದೆ. ತೀರ್ಥ ಮಾಡಿ ,ತುಪ್ಪಾಳೆಹಣ್ಣು ಮಾಡಿ ಹಂಚುತ್ತಾ ಇದ್ದೆ.!! ಹಾಡು, ಶ್ಲೋಕ, ಮಂತ್ರ, ಭಜನೆ….ಅಬ್ಬಬ್ಭಾ! ಮಂಗಳಾರತಿ ಮಾಡುವ ಮುಂಚೆ ಅದೇನು ಭಜನೆಯ ಆರ್ಭಟವೋ! ಕೊನೇಲೀ ಮಂಗಳ, ನಂತರ ಲಾಲಿ ಹಾಡಿ ದೇವರನ್ನು ಮಲಗಿಸಿಬಿಡ್ತಾ ಇದ್ವು!!..............................
ಎಲ್ಲಾ ನೆನಪುಗಳೂ ಮನದಲ್ಲಿ ಸುಳಿದು ಅಭಿಶೇಕವನ್ನು ಅಷ್ಟಕ್ಕೇ ನಿಲ್ಲಿಸಿದೆ.ಅರೇ, ಬಾಲ್ಯದ ಮಕ್ಕಳಾಟವನ್ನು ಇವತ್ತೂ ಮಾಡ್ತಾ ಇದ್ದೀನಾ? ಕಣ್ಮುಚ್ಚಿ ಕೂತೆ. ಅವತ್ತಿನಿಂದ ಇವತ್ತಿನವರಗೂ ನನ್ನ ಪೂಜೆ ಅಂದರೆ ಕಣ್ಮುಚ್ಚಿ ಕುಳಿತು ಭಗವಂತನ ಸ್ಮರಣೆ ಮಾಡುವುದೇ ಆಗಿದೆ. ಅಭಿಶೇಕ ,ಮಂಗಳಾರತಿ ಮಾಡುವುದೇ ಇಲ್ಲಾ, ಎಂದು ಹಠವನ್ನೇನೂ ತೊಟ್ಟಿಲ್ಲ. ಖುಷಿಗೆ ಮಾಡಿದ್ದುಂಟು.
ಅಭಿಶೇಕ ಅರ್ಧಕ್ಕೆ ನಿಲ್ಲಿಸಿ ಕಣ್ಮುಚ್ಚಿ ಕುಳಿತ ಘಟನೆಯನ್ನು ನನ್ನ ಮಿತ್ರನಿಗೆ ಹೇಳಿದೆ. “ಎಲ್ಲಾ ಕಡೆಯಲ್ಲೂ ದೇವರನ್ನು ಕಾಣುವ ನಿಮಗೆ ಆ ವಿಗ್ರಹದಲ್ಲಿ ದೇವರು ಕಾಣದೆ ಹೋದನೇ? ಅವರ ಮಾತಿನಲ್ಲಿ ವ್ಯಂಗ್ಯ ಅಡಕವಾಗಿತ್ತು. “ಈ ಬಗ್ಗೆ ಚರ್ಚೆಯನ್ನು ಈಗ ಮಾಡುವುದಿಲ್ಲ. ಕಾರಣ ನಿಮ್ಮ ಈ ಮಾನಸಿಕ ಸ್ಥಿತಿಯಲ್ಲಿ ನಿಮಗೆ ಕನ್ವಿನ್ಸ್ ಮಾಡುವುದು ಕಷ್ಟ. ನಿಧಾನವಾಗಿ ಯಾವಾಗಲಾದರೂ ಮಾತನಾಡೋಣ, ಎಂದೆ. ಆದಿನ ಇವತ್ತು ಬಂತು. ಅವರೊಡನೆ ನೇರವಾಗಿ ಮಾತನಾಡುತ್ತಿಲ್ಲ. ಆದರೆ ನನ್ನ ಅಭಿಪ್ರಾಯವನ್ನು ನಾಲ್ಕುಜನರೊಡನೆ ಹಂಚಿಕೊಂಡಾಗ ಅವರಿಗೂ ವಿಷಯ ತಲುಪದೇ ಇರದು. ಈಗ ಈ ವಿಚಾರಕುರಿತು ಸ್ವಲ್ಪ ಚಿಂತನ-ಮಂಥನ ನಡೆಸೋಣ. ಈ ಚರ್ಚೆಯಲ್ಲಿ ಗೆಲವು ನನ್ನದೇ ಆಗಬೇಕೆಂಬ ಶರತ್ತೇನೂ ಇಲ್ಲ. ಅಂತಿಮವಾಗಿ ಸತ್ಯದ್ದೇ ಗೆಲುವಾಗುವುದರಲ್ಲಿ ಸಂಶಯವಿಲ್ಲ.
ನನ್ನ ಮಿತ್ರನ ಪ್ರಶ್ನೆ ಏನು? ಎಲ್ಲೆಲ್ಲೂ ಇರುವ ಭಗವಂತನು ಈ ಪುಟ್ಟ ಮೂರ್ತಿಯಲ್ಲಿಲ್ಲದೇ ಹೋದನೇ?
ಖಂಡಿತವಾಗಿಯೂ ಆ ಪುಟ್ಟ ಮೂರ್ತಿಯಲ್ಲಿ ದೇವರಿಲ್ಲ, ಎಂದು ನಾನು ಹೇಳುವುದಿಲ್ಲ. ಆ ಮೂರ್ತಿಯಲ್ಲಷ್ಟೇಅಲ್ಲ, ಮಂಗಳಾರತಿ ಮಾಡಲಿಟ್ಟಿರುವ ತಟ್ಟೆಯಲ್ಲಿ, ಅಭಿಶೇಕದ ಸಾಮಗ್ರಿಯಲ್ಲಿ, ನಾನು ಕುಳಿತಿದ್ದ ಚಾಪೆಯಲ್ಲಿ ಎಲ್ಲೆಲ್ಲೂ ದೇವರಿದ್ದಾನೆ. ಅಂದಮೇಲೆ ದೇವರಿಂದ ದೇವರಿಗೆ ಮಂಗಳಾರತಿ, ದೇವರನ್ನೇ ಅಭಿಶೇಕವಾಗಿ ಮಾಡುತ್ತಿರುವ ನನ್ನಲ್ಲೂ ದೇವರಿದ್ದಾನೆ. ಓದುತ್ತಿರುವ ನಿಮ್ಮಲ್ಲೂ ದೇವರಿದ್ದಾನೆ. ಆ ದೇವರನ್ನು ಚಿಕ್ಕ ವಿಗ್ರಹಮಾಡಿ ಕುಬ್ಜಗೊಳಿಸಲು ನನಗೆ ಇಷ್ಟವಾಗಲಿಲ್ಲ. ಬಾಲ್ಯದಲ್ಲೇನೋ ಮಕ್ಕಳಾಟ ಆಡಿ ತೀರ್ಥ ಕುಡಿದು ಪ್ರಸಾದ ತಿಂದಿದ್ದಾಯ್ತು. ಅಷ್ಟೇಕೇ , ಅವನನ್ನು ಮಲಗಿಸಿದ್ದೂ ಆಯ್ತು!!. ಅಬ್ಭಾ ಈಗ ನನಗೆ ನಗು ಬರುತ್ತದೆ, ಯಾಕೆ ಗೊತ್ತಾ? ಈ ಬ್ರಹ್ಮಾಂಡದ ಎಲ್ಲಾ ಆಟದ ಸೂತ್ರದಾರನನ್ನು ನಾನು ಲಾಲಿ ಹೇಳಿ ಮಲಗಿಸಿ ಬಿಟ್ಟರೆ, ಈ ಬ್ರಹ್ಮಾಂಡದ ಗತಿ!!! ದೇವರೇ ಗತಿ, ಎನ್ನುವಂತಿಲ್ಲ. ಅವನನ್ನು ಮಲಗಿಸಿದ್ದಾಗಿದೆಯಲ್ಲಾ!!!
ಹೀಗೆ ಮನದಲ್ಲಿ ಮೂಡಿದ ಭಾವನೆಗಳನ್ನು ಗೆಳೆಯರೊಡನೆ ಹಂಚಿಕೊಂಡಾಗ “ನಿನಗೆ ಆರ್ಯ ಸಮಾಜದವರು ಬ್ರೈನ್ ವಾಶ್, ಮಾಡಿದ್ದಾರೆ! “ ಅಂತಾರೆ. ಹೌದು, ಆರ್ಯಸಮಾಜ ಹಲವು ಪುಸ್ತಕಗಳನ್ನು ನಾನು ಓದುತ್ತಿರುತ್ತೇನೆ. ಆದರೆ ಅವರ ಹತ್ತು ನಿಯಮಗಳಿವೆ, ಅವನ್ನು ಪಾಲಿಸಿದರೆ ಮಾತ್ರ ಅವನು ಆರ್ಯಸಮಾಜಿ, ಎಂದು ಆರ್ಯಸಮಾಜವು ಒಪ್ಪಿಕೊಳ್ಳುತ್ತದೆ. ಅದೊಂದು ಕಠಿಣ ವ್ರತ .ಅದು ನನ್ನ ಕೈಲಾಗದ ಕೆಲಸ. ಆದರೆ ನನ್ನ ಅಂತರಾಳದಲ್ಲಿ ಮೂಡುವ ತುಡಿತಕ್ಕೆ ಬೆಲೆಕೊಡುವ ನಾನು “ನೀವು ಹೀಗಿರಬೇಕೆಂದು ಹೇಳುವುದಿಲ್ಲ. ಸತ್ಯವಾಗಿ ಕಂಡದ್ದನ್ನು ಬರೆಯಲು ,ಹೇಳಲು ಹಿಂಜೆರೆಯುವುದಿಲ್ಲ. ಆದರೆ ಯಾರೊಬ್ಬರಿಗೂ ಹೀಗೆಯೇ ಇರಬೇಕೆಂದು ಒತ್ತಾಯ ಮಾಡುವುದೂ ಇಲ್ಲ. ಕೆಲವೆಲ್ಲಾ ಬಾಲಿಶವಾಗಿ ಕಂಡಿದ್ದನ್ನು ಒಪ್ಪಲು ನನ್ನ ಮನ ಹಿಂದೇಟು ಹೊಡೆದಾಗ ನನ್ನ ಅಂತರಾಳ ದ ಕರೆಗೆ ಓಗೊಟ್ಟು ನನ್ನ ಪಾಡಿಗೆ ನಾನಿರುವೆ.
ಈಗ ನೀವೇನಂತೀರಿ? ಎಂದು ಕೇಳುವುದಿಲ್ಲ. ಕಾರಣ ಈ ಬರಹ ಓದುವ ಪ್ರತಿಶತ 99ಜನರಲ್ಲಿ ನಾನೂ ಸೇರಿದಂತೆ ನೂರಾರು ವರ್ಷಗಳಿಂದ ಬೆಳೆದುಬಂದಿರುವ ಆಚರಣೆಗಳು, ಸಂಪ್ರದಾಯಗಳ ಬಂಧನಕ್ಕೆ ನಾವೆಲ್ಲಾ ಒಳಗಾಗಿರುವುದರಲ್ಲಿ ಸಂಶಯವಿಲ್ಲ. ಯಾವ ಆಚರಣೆಗಳನ್ನೂ ಯಾಕೆ ಹೀಗೆ? ಎಂದು ಕೇಳುವಂತಿಲ್ಲ. ಕೇಳಿದರೆ ಅವನು ತಲೆಹರಟೆ. ಯಾಕೆ ಗೊತ್ತಾ? ನಮಗೆ ಅದರ ಅರ್ಥ ಗೊತ್ತಿಲ್ಲ. ಆದ್ದರಿಂದ ಹೀಗೊಂದು ಮಾತನ್ನು ಸೃಷ್ಟಿ ಮಾಡಿದವರೂ ನಾವೇ? ಏನು ಗೊತ್ತಾ” ಋಷಿ ಮೂಲ, ನದಿ ಮೂಲ,…….ಕೇಳಬೇಡಿ. ಯಾಕೆ ಗೊತ್ತಾ? ಒಬ್ಬ ಋಷಿ ಹತ್ತಾರು ವರ್ಷಗಳ ಹಿಂದೆ ಕಟುಕನಾಗಿದ್ದಿರಬಹುದು.ಇನ್ನೂ ಏನೋ ಆಗಿರಬಹುದು, ನದಿಯೊಂದರ ಮೂಲ ಹುಡುಕುತ್ತಾ ಹೋದರೆ ಅದರಲ್ಲಿ ಕೊಚ್ಚೆ ನೀರು ಸೇರುವುದನ್ನು ಕಣ್ಣಾರೆ ಕಾಣಬೇಕಾಗುತ್ತದೆ!! ಆದರೆ ವೇದವು ಹೇಳುತ್ತದೆ …..
“ಯೂಯಮ್ ತತ್ ಸತ್ಯಶವಸ ಆವಿಶ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್- 1.86.9]
ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನಿಮ್ಮ ಸ್ವಸಾಮರ್ಥ್ಯದಿಂದ ಸತ್ಯವನ್ನುಆವಿಶ್ಕರಿಸಿ,ದುಷ್ಕಾಮನೆಯನ್ನು ನಿಮ್ಮ ಜ್ಞಾನ ಜ್ಯೋತಿಯಿಂದ ಸೀಳಿಹಾಕಿರಿ
ಅಷ್ಟೇ ಅಲ್ಲ, ಇನ್ನೊಂದು ಕಡೆ ವೇದವು ಕರೆ ಕೊಡುತ್ತದೆ” ಯಾವುದು ಪ್ರಾಚೀನವೋ, ಯಾವುದು ನೂತನವೋ , ಎಲ್ಲಕ್ಕೂ ಕಿವಿಗೊಡಿ, ಯಾವುದು ನಿಮ್ಮ ಅಂತ: ಕರಣದಲ್ಲಿ ಮೂಡುತ್ತದೋ, ಅದನ್ನೂ ಗಮನಿಸಿ, ವಿದ್ವಾಂಸರುಗಳು ತಿಳಿಸುವ ಸದ್ವಿಚಾರಗಳಿಗೂ ಕಿವಿಗೊಡಿ, ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗುವುದೋ ಆ ಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ. ವೇದದ ಕರೆ ನೋಡಿ, ಹೇಗಿದೆ! ಆದರೆ ಇಂದಿನ ಸಮಾಜದಲ್ಲಿ ಏನಾಗಿದೆ ಎಂದರೆ ಸಂಪ್ರದಾಯಕ್ಕೆ ಶರಣಾಗಿರುವವರು “ಆಸ್ತಿಕ”ರೆನಿಸಿಕೊಳ್ಳುತ್ತಾರೆ. ಅವರು ಯಾವ ಪ್ರಶ್ನೆ ಮಾಡುವಂತಿಲ್ಲ. ಅವರಿಗೂ ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ನಾಸ್ತಿಕರು! ನೋಡಿ ಹೇಗಿದೆ ನಮ್ಮ ಚಿಂತನೆ!! ನಿಜವಾಗಿ ಈ ನಾಸ್ತಿಕ ಎಂದು ಹಣೆಪಟ್ಟಿ ಹಚ್ಚಿಸಿಕೊಳ್ಳುವವನು ದೇವರ ಅಸ್ತಿತ್ವವನ್ನು ನಂಬುತ್ತಾನೆ. ಆದರೆ ಸರ್ವಾಂತರ್ಯಾಮಿಯಾದ ಆ ಭಗವಂತನಿಗೆ ರೂಪಕೊಟ್ಟು ಕುಬ್ಜನನ್ನಾಗಿ ಮಾಡಲಾರ. ಅಸತ್ಯ ಆಚರಣೆಗಳನ್ನು ಒಪ್ಪಲಾರ.ಇವನನ್ನ ನಾಸ್ತಿಕನೆನ್ನುತ್ತೀರಾ? ಈಗ ಹೇಳಿ ನೀವೇನಂತೀರಾ?