ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Tuesday, 26 February 2013

"ಜೀವನ ಎಂದರೆ ಹೀಗೇನೇ"








ಶ್ರೀ ಅಶೋಕ್ ಕುಮಾರ್ ಹಾಸನದ ಎಂ.ಸಿ.ಎಫ್ಹ್ ನಲ್ಲಿ ಇಂಜಿನಿಯರ್.  ವೇದಭಾರತಿಯ ಕ್ರಿಯಾಶೀಲ ಸದಸ್ಯರು. ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗ ಆಧರಿಸಿ "ಜೀವನ ಎಂದರೆ ಹೀಗೇನೇ" ಎಂಬ ಹೆಸರಿನಲ್ಲಿ ಇಂದಿನಿಂದ ಹಾಸನದ ಶ್ರೀ ಶಂಕರ ಮಠದಲ್ಲಿ ಉಪನ್ಯಾಸವನ್ನು ಮಾಡುತ್ತಿದ್ದಾರೆ. ಅದರ  ಒಂದು ವೀಡಿಯೋ ಕ್ಲಿಪ್ ಹಾಗೂ ಕೆಲವು ಚಿತ್ರಗಳು ಇಲ್ಲಿವೆ. ಸಮಯಾವಕಾಶವಾದಾಗ ಇದರ ಆಡಿಯೋ ಮತ್ತು ಉಪನ್ಯಾಸದ ಬರಹರೂಪವನ್ನು ಪ್ರಕಟಿಸಲಾಗುವುದು.

Friday, 15 February 2013

“ಎಲ್ಲರಿಗಾಗಿ ವೇದ” -ಕುಸುಮ-1

         ಕಳೆದ ನಾಲ್ಕು ತಿಂಗಳಿನಿಂದ ಪ್ರತೀ ಭಾನುವಾರ ಹಾಸನದ ಸ್ಥಳೀಯ ಪತ್ರಿಕೆ "ಜನಮಿತ್ರದಲ್ಲಿ" "ಎಲ್ಲರಿಗಾಗಿ ವೇದ" ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆಯುತ್ತಿರುವೆ. ಅದನ್ನು ಗಮನಿಸಿದ ಮಿತ್ರರೊಬ್ಬರು ನೀವು ನಿಮ್ಮ ಬ್ಲಾಗ್ ನಲ್ಲಿ ಇದನ್ನು ಯಾಕೆ ಪೋಸ್ಟ್ ಮಾಡುತ್ತಿಲ್ಲವೆಂದು ಕೇಳಿದರು.ನನ್ನ ಮುಖ್ಯ ಬ್ಲಾಗ್ ಮತ್ತು ವೆಬ್ಸೈಟ್ "ವೇದಸುಧೆ" ಯಲ್ಲಿ ಶ್ರೀ ಸುಧಾಕರ ಶರ್ಮರ ಗಹನವಾದ ಆಡಿಯೋ ಗಳಿರುವುದರಿಂದ ಈಬರಹಗಳನ್ನು ಅಲ್ಲಿ ಪ್ರಕಟಿಸುವ ಬದಲು ಇಲ್ಲಿ ಪ್ರಕಟಿಸುತ್ತಿರುವೆ. ಈಗಾಗಲೇ ಬರೆದಿರುವ ಹದಿನೇಳು  ಕುಸುಮಗಳನ್ನು ಆಗಿಂದಾಗ್ಗೆ ಪ್ರಕಟಿಸುವೆ. ಇವೆಲ್ಲಾ ಮುಗಿದ ನಂತರ ಪ್ರತೀ ಭಾನುವಾರ ಈ ಲೇಖನ ಮಾಲೆ ಮುಂದುವರೆಯುತ್ತದೆ. ಓದುಗರ ಪ್ರೋತ್ಸಾಹ ಮತ್ತು ಅಭಿಪ್ರಾಯವನ್ನು ನಿರೀಕ್ಷಿಸುವೆ. ವೇದವು ಗಹನವಾದ ವಿಷಯವಾದ್ದರಿಂದ ಓದುಗರಿಂದ  ಪ್ರಶ್ನೆಗಳಿದ್ದರೆ ಉತ್ತರಿಸುವ ಪ್ರಯತ್ನ ಮಾಡಲಾಗುವುದು. ಹೆಚ್ಚಿನ ಸಹಾಯಕ್ಕೆ ನಮ್ಮೊಡನೆ ಶ್ರೀ ಸುಧಾಕರಶರ್ಮರು ಇದ್ದೇ ಇರುತ್ತಾರೆ.

ವಿಷಯ ಪ್ರವೇಶಕ್ಕೆ ಮುಂಚೆ:
ಈ ಮಾಲಿಕೆಯ ಆರಂಭದಲ್ಲಿಯೇ ಒಂದು ಮಾತನ್ನು ಓದುಗರಲ್ಲಿ ಸ್ಪಷ್ಟಪಡಿಸಿಬಿಡುವೆ. ಈ ಮಾಲಿಕೆಯ ಉದ್ಧೇಶವೆಂದರೆ “ವೇದ” ಎಂದರೆ  “ಇದು ನಮ್ಮಂತಹ ಸಾಮಾನ್ಯರಿಗಲ್ಲ” …ವೇದವನ್ನು ತಿಳಿಯಲು  ಸಂಸ್ಕೃತದ ಜ್ಞಾನ   ಇರಬೇಕು…ವೇದ ಎಂದರೆ ಪೂಜೆ ಪುನಸ್ಕಾರಕ್ಕಾಗಿ ಇರುವ ಮಂತ್ರಗಳು…  ಎಲ್ಲರಿಗೂ   ವೇದವನ್ನು ಓದುವ ಅರ್ಹತೆ ಇಲ್ಲ…ಹೆಂಗಸರು ಓದಬಾರದು…ಯಾವುದೋ ಒಂದು ವರ್ಗದವರು ಮಾತ್ರ ಓದಬೇಕು…ಇತ್ಯಾದಿ…ಇತ್ಯಾದಿ…ವಿಚಾರಗಳು ಬಹುಪಾಲು ಜನರಲ್ಲಿ ಸಾಮಾನ್ಯವಾಗಿ ಬೇರೂರಿದೆ. ಅದಕ್ಕೆ ಹಲವಾರು ಕಾರಣಗಳು ಇವೆ .ಕಾರಣಗಳು ಏನೇ ಇರಲಿ, ಈ ಲೇಖನದ ಉದ್ಧೇಶವೆಂದರೆ ವೇದವೆಂದರೆ ಇದು “ಅಸಾಮಾನ್ಯರಿಗೆ”ಎನ್ನುವ ಭಾವನೆಯನ್ನು ಕಿತ್ತುಹಾಕಿ ಎಲ್ಲಾ ಮಾನವರ ನೆಮ್ಮದಿಯ ಬದುಕಿಗಾಗಿ ಇರುವ ಅರಿವಿನ ಭಂಡಾರ ಎಂಬುದನ್ನು  ಕೆಲವು ವೇದ ಮಂತ್ರವನ್ನು ಆಧರಿಸಿ  ಸರಳವಾದ ಮಾತುಗಳಲ್ಲಿ  ನನ್ನಂತಹ “ಸಾಮಾನ್ಯನಿಂದ ಸಾಮಾನ್ಯರಿಗೆ”  ತಿಳಿಸುವುದೇ ಆಗಿದೆ. ಈ ಮಾಲಿಕೆಯು ಮುಂದುವರೆಯುವಾಗ ವೇದ ಪಂಡಿತರುಗಳು ಹಲವು  ಭಾಷ್ಯಗಳ ಆಧಾರದಮೇಲೆ  ಒಂದೇ ಮಂತ್ರಕ್ಕೆ ಬೇರೆಯ ಅರ್ಥವನ್ನೂ ನೀಡುವ ಅವಕಾಶಗಳು ಇದ್ದೇ ಇದೆ. ಆದರೆ ವೇದ ಪಂಡಿತರಲ್ಲಿ ನನ್ನ ಮನವಿ ಏನೆಂದರೆ ವೇದವು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವ ಭೌಮ , ಎಂಬುದನ್ನು ವೇದ ಮಂತ್ರಗಳಲ್ಲೇ ನಿರೂಪಿಸಿದೆ. ಆದರೆ ಅದಕ್ಕೆ ಭಾಷ್ಯವನ್ನು ಬರೆಯುವಾಗ ಅಂದಿನ ಸಾಮಾಜಿಕ ಜೀವನಕ್ಕನುಗುಣವಾಗಿ ವೇದಮಂತ್ರವನ್ನು ಅರ್ಥೈಸಿದ್ದಾರೆಂಬುದು ಗಮನದಲ್ಲಿರಬೇಕು.ಆದರೆ ಇಂದಿನ ಕಾಲಘಟ್ಟದಲ್ಲಿ ಯಾಸ್ಕಾಚಾರ್ಯರ  ನಿರುಕ್ತದ ಆಧಾರದಿಂದ ವೇದ ಮಂತ್ರಗಳನ್ನು ಬಿಡಿಸಿಕೊಂಡಾಗ ಮಾತ್ರ  ವೇದವು ಇಂದಿನ ಕಾಲಕ್ಕೂ ,ಮುಂದಿನಕಾಲ ಘಟ್ಟಕ್ಕೂ ಸಹ ಹೇಗೆ ಉಪಯುಕ್ತ ಎಂಬ ಅರಿವು ಮೂಡುತ್ತದೆ.  ಈಗಾಗಲೇ ನಿರುಕ್ತದ ಆಧಾರದಲ್ಲಿ ವೇದಮಂತ್ರಗಳಿಗೆ ಅರ್ಥವನ್ನು ಬಿಡಿಸಿ ಸರ್ವಮಾನವರ ಹಿತಕ್ಕಾಗಿ ಉಪಯೋಗವಾಗುವಂತೆ ಬರೆದಿರುವ ಪಂಡಿತ್ ಸುಧಾಕರ ಚತುರ್ವೇದಿಯವರ “ ವೇದೋಕ್ತ ಜೀವನ ಪಥ” ಮತ್ತು ವೇದಾಧ್ಯಾಯೀ ಸುಧಾಕರಶರ್ಮರು ನನ್ನ ಅಂತರ್ಜಾಲ ತಾಣವಾದ vedasudhe.com ಗಾಗಿ ನೀಡಿರುವ ಉಪನ್ಯಾಸಗಳೇ ನನ್ನ ಬರವಣಿಗೆಗೆ ಆಧಾರವೆಂಬುದನ್ನು ಸವಿನಯವಾಗಿ ತಿಳಿಸಬಯಸುವೆ.ಅಲ್ಲದೆ ಸರ್ವಜನರ ಹಿತಕ್ಕಾಗಿ ಬರುವ ಯಾರದೇ ಸಲಹೆಗಳನ್ನು ಸವಿನಯವಾಗಿ ಸ್ವೀಕರಿಸಲು ಬದ್ಧನಾಗಿರುವೆ. ಇನ್ನು ಒಂದೊಂದೇ ಹೆಜ್ಜೆ ಹಾಕುತ್ತಾ ಸಾಗೋಣ.
ವೇದ ಎಂದರೇನು?
            ವೇದ ಎಂದರೆ  ಜ್ಞಾನ. ಇಷ್ಟು ಸರಳವಾಗಿರುವ ಅರ್ಥವನ್ನು ಅದೆಷ್ಟು ಕಠಿಣ ಮಾಡಿಬಿಟ್ಟಿದ್ದಾರೆ! ಹಾಗೆನಿಸೋದಿಲ್ಲವೇ? ಜ್ಞಾನ ಎಂದರೆ ಅರಿವು. ಎಂತಹ ಅರಿವು ? ಸುಂದರ ಬದುಕು ನಡೆಸುವುದು ಹೇಗೆಂಬ ಅರಿವು.ಮುಂದೆ ಒಂದೊಂದೇ ಮಂತ್ರವನ್ನು ಬಿಡಿಸುತ್ತಾ ಹೋಗುವಾಗ “ ಇದು ಪೂಜೆಯ ಮಂತ್ರವೇ? ಶ್ರಾದ್ಧ ಕರ್ಮಗಳಿಗೆ ಮಾತ್ರ ಪಠಿಸುವ ಮಂತ್ರವೇ? ಹವನ ಹೋಮಗಳಿಗೆ ಮಾತ್ರ ಸೀಮಿತವೇ? ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
 “ಎಲ್ಲರಿಗಾಗಿ ವೇದ”  ಎಂಬುದಕ್ಕೆ ಆಧಾರವಾದ  ವೇದ ಮಂತ್ರಗಳು, ಮನುಷ್ಯನ ನೆಮ್ಮದಿಯ ಬದುಕಿಗೆ ವೇದವು ಏನು ಸೂತ್ರವನ್ನು ಕೊಡುತ್ತದೆ?  ಇವನು   ಶ್ರೇಷ್ಠ ಇವನು ಕನಿಷ್ಠನೆನ್ನಲು ವೇದದಲ್ಲಿ ಅವಕಾಶವಿದೆಯೇ? ಎಲ್ಲವನ್ನೂ ಮುಂದಿನ ಬರಹಗಳಲ್ಲಿ ನೋಡೋಣ.
ವೇದವನ್ನು ಯಾರು ಬರೆದರು?
ವೇದವು ಅಪೌರುಷೇಯ.ಇದನ್ನು ಮನುಷ್ಯರು    ಬರೆದದ್ದಲ್ಲ. ಅಂದರೆ ಹೇಗೆ ಬಂತು? ಎಂಬುದೇ ತಾನೇ ಮುಂದಿನ ಪ್ರಶ್ನೆ! ವೇದವನ್ನು ಋಷಿಗಳು ತಮ್ಮ ತಪೋ ಬಲದಿಂದ ಕಂಡುಕೊಂಡರು. “ ಋಷಿರ್ದರ್ಶನಾತ್” ಎನ್ನುತ್ತಾರೆ. ಅಂದರೆ ಋಷಿಗಳು ಕಂಡುಕೊಂಡ  ಸತ್ಯ. ಋಷಿಗಳು ಅಂತರ್ಮುಖಿಗಳಾಗಿ ತಪಸ್ಸನ್ನು ಆಚರಿಸಿದಾಗ ಭಗವಂತನಿಂದಲೇ ಕಂಡುಕೊಂಡ    ಸತ್ಯವೇ ವೇದಗಳು. ಮಾನವ ಜನ್ಮ ಯಾವಾಗ ಆಯ್ತೋ ಆಗಿನಿಂದಲೇ ವೇದಗಳು ಇವೆ. ವಿಜ್ಞಾನಿಯೊಬ್ಬ   ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ. ಯಾವುದೇ ವಸ್ತುವನ್ನು  ಮೇಲೆ ಎಸೆದರೂ ಭೂಮಿಯು ಅದನ್ನು ಆಕರ್ಶಿಸುವುದರಿಂದ ಅದು ಭೂಮಿ ಮೇಲೆ ಬೀಳುತ್ತದೆ. ವಿಜ್ಞಾನಿಯು ಈ ಸತ್ಯವನ್ನು ಕಂಡುಹಿಡಿಯುವ ಮುಂಚೆಯೂ  ಯಾವುದೇ ಮೇಲೆ ಎಸೆದ ವಸ್ತು ಭೂಮಿಗೆಗೆ ಬೀಳುತ್ತಲೇ ಇತ್ತಲ್ಲವೇ? ಆದರೆ ವಿಜ್ಞಾನಿಯು     ಈ ನಿಯಮವನ್ನು ತನ್ನ ಸಂಶೋಧನೆಯಿಂದ  ಕಂಡುಕೊಂಡನು. ಹಾಗೆಯೇ ನಮ್ಮ ಋಷಿಮುನಿಗಳು ಅದಾಗಲೇ ಇದ್ದ  ವೇದ ಜ್ಞಾನವನ್ನು ತಮ್ಮ ತಪಸ್ಸಿನ ಬಲದಿಂದ ಕಂಡುಕೊಂಡರು. ಇಷ್ಟನ್ನು ವೇದದ ಉಗುಮದ ಬಗ್ಗೆ ಅರಿತು ಕೊಂಡರೆ ಸಾಕು. ಯಾವ್ಯಾವ ಮಂತ್ರವನ್ನು ಯಾವ ಯಾವ ಋಷಿಗಳು ಕಂಡುಕೊಂಡರೆಂಬುದನ್ನು  ಆಯಾಮಂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ವೇದವ್ಯಾಸರು  ಅಲ್ಲಲ್ಲಿ ಹರಡಿದ್ದ ವೇದ ಜ್ಞಾನವನ್ನು  ನಾಲ್ಕು ಭಾಗಗಳಲ್ಲಿ ಕ್ರಮವಾಗಿ ಹಂಚಿದರು. ಆದರೆ  ನಾಲ್ಕೂ ವೇದಗಳು ಭಗವಂತನಿಂದಲೇ ಪ್ರಕಟವಾದವೆಂಬುದನ್ನು ಒಂದು ವೇದ ಮಂತ್ರವೇ ಸಾರುತ್ತದೆ. ಆ ಮಂತ್ರದಿಂದಲೇ   ಈ ಮಾಲಿಕೆಯನ್ನು ನಾಳೆ  ಮುಂದುವರೆಸೋಣ.

Wednesday, 6 February 2013

“ಹಿಂದು” ಈ ದೇಶದ ಹೆಸರು


ಮತ ಎಂದರೇನು? ಚುನಾವಣೆ ಬಂದಾಗ ಸಹಜವಾಗಿ ಕೇಳುವ ಮಾತು " ನಿಮ್ಮ ಮತ ಯಾರಿಗೆ? " ಅಂದರೆ ನೀವು ಯಾರನ್ನು ಒಪ್ಪುತ್ತೀರಿ? ನಿಮ್ಮ ಅಭಿಪ್ರಾಯವೇನು? ಮತ-ಧರ್ಮದ ಹೆಸರು ಬಂದಾಗಲೂ ಇದೇ ಆಧಾರದಲ್ಲಿ ಅರ್ಥಮಾಡಿಕೊಳ್ಳಬೇಕು. ಮತ ಎಂದೊಡನೆ ಅದಕ್ಕೊಬ್ಬ ಸ್ಥಾಪಕ/ಪ್ರವಾದಿ.          [ ಪ್ರವಾದಿ ಎಂದರೆ   ವಿಶೇಷ ವಾಗಿ ವಿಚಾರ ಮಂಡಿಸುವವನು] ಅದಕ್ಕೊಂದು ಆಧಾರ ಗ್ರಂಥ.
ಹೀಗೆ  ವಿಚಾರ ಮಾಡುವಾಗ ನಮ್ಮ ಮುಂದೆ ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ.......ಹೀಗೆ ಹಲವು ಮತಗಳು ಕಣ್ಣೆದುರು ಬರುತ್ತ್ತವೆ. ಕ್ರೈಸ್ತ ಮತದ ಪ್ರವಾದಿ ಏಸೂಕ್ರಿಸ್ತ, ಆಧಾರ ಗ್ರಂಥ ಬೈಬಲ್,ಅನುಯಾಯಿಗಳು ಕ್ರೈಸ್ತರು,  ಇಸ್ಲಾಮ್ ಸ್ಥಾಪಕ/ಪ್ರವಾದಿ ಮೊಹಮದ್ ಪೈಗಂಬರ್.ಆಧಾರಗ್ರಂಥ ಖುರಾನ್. ಅನುಯಾಯಿಗಳು ಮುಸಲ್ಮಾನರು. ಹೀಗೆಯೇ ಜೈನರು, ಬೌದ್ಧರು, ಸಿಕ್ಖರು.....ಮುಂತಾದ ಉಧಾಹರಣೆಗಳು ಬರುತ್ತವೆ. 
 ಆದರೆ ಹಿಂದು ಹೆಸರು ಬಂದಾಗ ಇದು ಮತವೇ? ಇದರ ಸ್ಥಾಪಕರಾರು? ಇದರ ಧರ್ಮಗ್ರಂಥ ಯಾವುದು? ಎಂದು ವಿಚಾರ ಮಾಡಿದಾಗ  ಒಬ್ಬ ಪ್ರವಾದಿಗೆ ,ಒಂದು  ಮತಗ್ರಂಥಕ್ಕೆ ಇದು ಸೀಮಿತವಾಗುವುದಿಲ್ಲ. ಹಾಗಾಗಿ ಇದು ಒಂದು ಮತವೇ ಅಲ್ಲ   , ನಿಜವಾದ ಮತವೆಂದರೆ ಕ್ರೈಸ್ತ, ಇಸ್ಲಾಮ್ ಉಳಿದವರೇನಿದ್ದರೂ ನೂರಾರು ಜಾತಿಗಳಲ್ಲಿ ಹಂಚಿಹೋಗಿರುವವರು ಎಂದು ವಾದ ಮಾಡುವ ಜನರಿದ್ದಾರೆ. 
ಹಾಗಾದರೆ   " ಹಿಂದು "  ಎಂದರೇನು? 
ಹಿಂದು ಎಂಬುದು ಈ ದೇಶದ ಹೆಸರು, ಇಲ್ಲಿನ ಸಂಸ್ಕೃತಿಯ ಹೆಸರು, ಇಲ್ಲಿನ ಪರಂಪರೆಯ ಹೆಸರು. ಇಲ್ಲಿನ ಧರ್ಮದ ಹೆಸರು. ಧರ್ಮ ಎಂದೊಡನೆ ವಿಚಲಿತರಾಗುವ ಅಗತ್ಯವಿಲ್ಲ. ಧರ್ಮ ಎಂದರೆ ಜೀವನ ಪದ್ದತಿ. ಮಾನವೀಯ ಮೌಲ್ಯಗಳನ್ನು ಧರಿಸಿಕೊಂಡು ನಡೆಸುವ ಜೀವನ ಪದ್ದತಿ ಯೇ ಧರ್ಮ. ಆದರೆ ದುರ್ದೈವ ವೆಂದರೆ ಧರ್ಮದ ಹೆಸರಲ್ಲಿ ಈ ದೇಶದಲ್ಲಿ ಸಂಘರ್ಷ ನಡೆಯುತ್ತದೆ. 
ಸಾವಿರಾರು ಋಷಿಮುನಿಗಳು ತಪಸ್ಸನ್ನು ಮಾಡಿ ಕಂಡುಕೊಂಡ ಜೀವನ ಮಾರ್ಗವೇ ಧರ್ಮ. ಯಾಕೆ ಇದನ್ನು ಹಿಂದು ಧರ್ಮವೆಂದು ಕರೆದರು? ಯಾಕಾಗಿ ಇದನ್ನು ಹಿಂದು ದೇಶವೆಂದು ಕರೆದರು?
ಆಧಾರ ವಿದೆ.......
ಬೃಹಸ್ಪತಿ ಆಗಮದಂತೆ  ಹಿಮಾಲಯ ಪದದ “ಹಿ” ಮತ್ತು ಇಂದು ಸರೋವರದ  “ಇಂದು” ಪದಗಳೆ ಸೇರಿ “ಹಿಂದು” ಆಗಿದೆ. ಇವೆರಡೂ ಕೂಡಿ ನಮ್ಮ ಮಾತೃಭೂಮಿಯ ವಿಸ್ತಾರವನ್ನು ಹೇಳುತ್ತದೆ.
ಹಿಮಾಲಯಮ್ ಸಮಾರ್ಭ್ಯ ಯಾವದಿಂ ದು   ಸರೋವರಮ್
ತಮ್ ದೇವ ನಿರ್ಮಿತಮ್ ದೇಶಂ ಹಿಂದುಸ್ಥಾನಮ್ ಪ್ರಚಕ್ಷತೇ||

ಅಂದರೆ ದೇವತೆಗಳಿಂದ ನಿರ್ಮಿತಿಗೊಂಡು ಉತ್ತರದ ಹಿಮಾಲಯದಿಂದ ದಕ್ಷಿಣದ  ಹಿಂದು ಮಹಾಸಾಗರದ ವರಗೆ ಪಸರಿಸಿರುವ ಈ ನಾಡನ್ನು ಹಿಂದುಸ್ಥಾನ ಎಂದು ಕರೆಯುತ್ತಾರೆ.
ಅಂದರೆ ಈ ದೇಶದ ಹೆಸರು “ಹಿಂದುಸ್ಥಾನ”. ಇಲ್ಲಿರುವವರು “ಹಿಂದುಗಳು” .ಅಷ್ಟೆ. very simple. ಆದರೆ  “ಹಿಂದು” ಎಂಬ ಶಬ್ಧಕ್ಕೆ  ಯಾಕೆ ಇಷ್ಟು ಸಂಘರ್ಷ? ನಮ್ಮ ಒಬ್ಬ ನಾಯಕರಂತೂ ಹೇಳಿಯೇ ಬಿಟ್ಟರು “ ನನ್ನನ್ನು    ಕತ್ತೆ ಎಂದು ಬೇಕಾದರೂ ಕರೆಯಿರಿ, ನನ್ನನ್ನು “ಹಿಂದು” ಎಂದು ಮಾತ್ರ ಕರೆಯಬೇಡಿ. ಅವರನ್ನು ಕತ್ತೆ ಎಂದೇ ಜನರುಬೇಕಾದರೆ ಕರೆದುಕೊಳ್ಳಲಿ. ನಮ್ಮ ಮತ್ತೊಬ್ಬ ನಾಯಕರು ಹೇಳಿದ್ದರು “ Un fortunately I took birt as Hindu” ನಮ್ಮ ಧರ್ಮ ಶಾಸ್ತ್ರಗಳು ಹೇಳುತ್ತವೆ “ “ಇದು ದೇವ ನಿರ್ಮಿತ ದೇಶ-ಹಿಂದುಸ್ಥಾನ”  ಆದರೆ ನಮ್ಮ ನಾಯಕ ಶಿರೋಮಣಿ ಇಲ್ಲಿ ದುರ್ದೈವದಿಂದ ಹುಟ್ಟಿದರಂತೆ.
ಅಂದರೆ ರಾಜಕಾರಣಿಗಳು “ಎಲ್ಲಿ ಮುಸ್ಲಿಮ್ ಮತಗಳು ತಮಗೆ ಬರುವುದಿಲ್ಲವೋ ಎಂದು ಹೆದರಿ ಮುಸಲ್ಮಾನರನ್ನು ಓಲೈಸಲು “ ನಾನು ಹಿಂದುವೇ ಅಲ್ಲ, ನಾನು ಹಿಂದುವಾಗಿರುವುದು ನನ್ನ ದುರ್ದೈವ” ಎನ್ನುವ  ಇವರನ್ನು  ಮುಸಲ್ಮಾನರೂ ನಂಬುವುದಿಲ್ಲವೆಂಬ ಸತ್ಯ ಇವರಿಗೆ ಗೊತ್ತಿಲ್ಲ. “ ನಮ್ಮ ಓಟಿಗಾಗಿ ತಮ್ಮವರನ್ನೇ ಹೀಯಾಳಿಸುವ ಇವನನ್ನು ಗೆಲ್ಲಿಸಿದರೆ  ನಮಗೆ ಒಳ್ಳೆಯದು ಮಾಡುತ್ತಾನೆಂಬ ನಂಬಿಕೆ ಏನು? ಎಂದು ಮುಸಲ್ಮಾನರೂ ಇವನನ್ನು ದೂರವಿಡುವ ಕಾಲ ದೂರವಿಲ್ಲ.
ಓಟಿನ ರಾಜಕಾರಣ ಬದಿಗಿರಲಿ. ಆದರೆ “ನಾನು ಹಿಂದು” ಎನ್ನಲು ನಾಚಿಕೆ ಪಡಬೇಕೇ?
ಈ ವಿಷಯವನ್ನು  ಭಾರತೀಯರೆಲ್ಲರೂ ಗಟ್ಟಿಮಾಡಿಕೊಳ್ಳ  ಬೇಕು.  ಈ ದೇಶದಲ್ಲಿ ಹುಟ್ಟಿರುವ ನಾನು ಮೊದಲು “ಹಿಂದು” ಅಂದರೆ ಹಿಂದುಸ್ಥಾನದ ಪ್ರಜೆ. ಭಾರತೀಯನೆಂದರೂ ತಪ್ಪಿಲ್ಲ. ನಾವೇಕೆ ಭಾರತೀಯರೆಂದು ಕರೆಯಲ್ಪಡುತ್ತೇವೆಂಬುದಕ್ಕೆ  ಇಲ್ಲಿ ನೋಡಿ

ಉತ್ತರಮ್ ಯತ್ಸಮುದ್ರಸ್ಯ  ಹಿಮಾದ್ರೇಶ್ಚೈವ ದಕ್ಷಿಣಮ್
ವರ್ಷಮ್ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿ:

ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭಾರತ ಎಂದು ಕರೆಯುತ್ತೇವೆ. ಭಾರತದಲ್ಲಿ ವಾಸಿಸುವವರು ಭಾರತೀಯರು. ಅಷ್ಟೆ.  ಹಿಂದುಸ್ಥಾನವೆಂದರೆ ಭಾರತ ,ಹಿಂದು ಎಂದರೆ ಭಾರತೀಯ. ಅಷ್ಟೆ. very simple.

ಹೀಗೆ ಋಷಿ ಮುನಿಗಳ   ತಪಸ್ಸಿನಿಂದ ದತ್ತವಾದ ಹಿಂದು ಧರ್ಮ ಏನು ಹೇಳುತ್ತದೆ....

"ಏಕಂ ಸತ್ ವಿಪ್ರಾ: ಬಹುದಾ ವದಂತಿ"

ಸತ್ಯ ಎಂಬುದು ಒಂದೇ, ಅದನ್ನು ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ. ಬಹಳ ಸರಳವಾದ ಮಾತಿದು. ಅದರರ್ಥ ಭಗವಂತನೆಂಬುವನು ಒಬ್ಬನೇ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವರು."ದೇವನೊಬ್ಬ ನಾಮ ಹಲವು" ಎಂದರೂ ಇದೇ ಅರ್ಥ ತಾನೇ.
 ನಮ್ಮ ಋಷಿ ಮುನಿಗಳು ಕಂಡುಕೊಂಡ   ಸತ್ಯವಿದು.  ದೇವರನ್ನು ಯಾವ ಹೆಸರಿಂದಲಾದರೂ ಕರೆಯಿರಿ. ಅವನನ್ನು ಬ್ರಹ್ಮ, ವಿಷ್ಣು, ಮಹೇಶ್ವರ ನೆನ್ನಿ. ಕ್ರಿಸ್ತನೆನ್ನಿ. ಕೃಷ್ಣನೆನ್ನಿ. ಅಲ್ಲಾ ಎನ್ನಿ,...ಮಾರಮ್ಮನೆನ್ನಿ ಯಾವ ಹೆಸರಿನಲ್ಲಾದರೂ ಕರೆಯಿರಿ  "ಏಕಂ ಸತ್" .ಸತ್ಯ ಮಾತ್ರ ಒಂದೇ. ಆ ಭಗವಂತ ಮಾತ್ರ ಒಬ್ಬನೇ. ಇದು ಹಿಂದುಧರ್ಮದ  ವೈಶಿಷ್ಠ್ಯ. 
ನನ್ನನ್ನು ನಂಬು, ನನ್ನಿಂದ ಮಾತ್ರವೇ ಮೋಕ್ಷ, ಎಂಬ ವಿಚಾರಕ್ಕೆ ಹಿಂದು ಧರ್ಮದಲ್ಲಿ ಆಸ್ಪದವೇ ಇಲ್ಲ.  ವೇದವು ಕರೆ ಕೊಡುತ್ತದೆ......

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ  ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ: ಶುಭಂ ಯಾತಾಮನು ರಥಾ ಅವೃತ್ಸತಾ|| 
ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ… 
ಹೇ ಮನುಜರೇ, ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡು….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?
 ವೇದವನ್ನಾಗಲೀ ಇತರ ಯಾವುದೇ ಪ್ರಾಚೀನ ಗ್ರಂಥವನ್ನಾಗಲೀ ನೋಡಿದಾಗ  ಇಡೀ ವಿಶ್ವದ ಜನರು ಒಂದೇ ಕುಟುಂಬದವರು ಎಂದು ಸಾರುತ್ತದೆ. " ಸರ್ವೇ ಭದ್ರಾಣಿ ಪಶ್ಯಂತು ,ಮಾ ಕಷ್ಚಿತ್ ದು:ಖ ಭಾಗ್ಭವೇತ್" ಎಂದು ಕರೆಕೊಡುವ ಮಂತ್ರಗಳಲ್ಲಿನ ಅರ್ಥ ಬಲು ವಿಶಾಲ ಮನೋಭಾವನೆ ಹೊಂದಿದೆ.

“ಹಿಂದು” ಮತವಾಗಿದ್ದು ಯಾವಾಗ?

ನಾನು ಮುಂಚೆಯೇ ತಿಳಿಸಿದಂತೆ  ಹಿಂದು ಎನ್ನುವುದು  ನಮ್ಮ ರಾಷ್ಟ್ರೀಯತೆಯ ಹೆಸರು. ಈ ರಾಷ್ಟ್ರದ ಹೆಸರು. ಹಿಂದುಸ್ಥಾನದಲ್ಲಿ ಹುಟ್ಟಿದವ ಹಿಂದು ಅಷ್ಟೆ.  ಹಾಗಾದರೆ ಇಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಕ್ಖರು, ಭೌದ್ಧರು ಮುಂತಾದವರು ಈ ದೇಶದಲ್ಲಿ ಹುಟ್ಟಿಲ್ಲವೇ? ಅವರೆಲ್ಲಾ ಹಿಂದುಗಳೇ?
ಹೌದು , ಮೊದಲು ಎಲ್ಲರೂ ಹಿಂದುವೇ, ಆನಂತರ  ಅವರವರ ಮತವನ್ನು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. “ನಾನು ಹಿಂದು” ನನ್ನ ಪೂಜಾಪದ್ದತಿಯಂತೆ ನಾನು ಕ್ರೈಸ್ತ, ನಾನು ಮುಸ್ಲಿಮ್……ಯಾರು ಬೇಡವೆಂದವರು. “ಏಕಂ ಸತ್, ವಿಪ್ರಾ ಬಹುದಾ ವದಂತಿ” ಎಂದು ತಾನೇ ನಮ್ಮ ಋಷಿಮುನಿಗಳು ಹೇಳಿರುವುದು. ಯಾರೇ ಆಗಲೀ ನಾನು  ಕ್ರೈಸ್ತ ಮತೀಯ, ನಾನು ಮುಸ್ಲಿಮ್ ,ಎಂದು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಅದು ಅವರ ಪೂಜಾ ಪದ್ದತಿ. “ದೇವನೊಬ್ಬ ನಾಮ ಹಲವು, ಅಷ್ಟೆ. ಕೃಷ್ಣನೆನ್ನುವರು ಕೃಷ್ಣ ನೆನ್ನಲಿ, ಕ್ರಿಸ್ತ ನೆನ್ನುವರು ಕ್ರಿಸ್ತ ಎನ್ನಲಿ. ಆದರೆ ಎಲ್ಲರೂ ಭಾರತೀಯ ಎನ್ನಬಹುದು ಅಥವಾ ಹಿಂದು ಎನ್ನಬಹುದು. ಎರಡೂ ಅಷ್ಟೇ ಸಮಾನ ಪದಗಳು.
ಸಾಮಾನ್ಯವಾಗಿ  ಪೂರ್ವದಿಂದಲೂ ನಮ್ಮನ್ನು ಆರ್ಯರು, ಸನಾತನಿಗಳು, ವೈದಿಕರು ಎನ್ನುವ ರೂಢಿ   ಯಿತ್ತು. ಆರ್ಯ ಎಂದರೆ ಶ್ರೇಷ್ಠ ಎಂದು ಅರ್ಥ ಅಷ್ಟೆ. ದೇವನಿರ್ಮಿತ ದೇಶದಲ್ಲಿರುವವರೆಲ್ಲರೂ ಆರ್ಯರೇ ಹೌದು. ನಮ್ಮದು ಅತ್ಯಂತ ಪುರಾತನವಾದ  ಸಂಸ್ಕತಿಯಾದ್ದರಿಂದ “ಸನಾತನಿ” ಎನ್ನುವ ಹೆಸರು ಬಂತು.ವೇದವನ್ನು ನಂಬುವವರಾದ್ದರಿಂದ ವೈದಿಕರೆಂದೂ ಕರೆಯುತ್ತಾರೆ.
ಸರಿ, ಹಾಗಾದರೆ ಹಿಂದು ಮತವಾಗಿದ್ದು, ಯಾವಾಗ?
ಯಾವಾಗ  ಕ್ರೈಸ್ತರು,  ಮುಸ್ಲ್ಮಾನರು, ತಮ್ಮ ತಮ್ಮ ಮತಗಳಿಗೆ ಇಲ್ಲಿನ ಸನಾತನಿಗಳನ್ನು ಮತಾಂತರ ಮಾಡುತ್ತಾ ಹೋದರು, ಆಗ ಅನಿವಾರ್ಯವಾಗಿ ತಮ್ಮನ್ನು ತಾವು “ಹಿಂದು ಮತೀಯ ” ಎಂಬ ಮತದ ಹೆಸರಲ್ಲಿ ಸಂಘಟಿತರಾಗುತ್ತಾ ಹೋದರು. ಆದರೆ ಇಂದು “ಹಿಂದು” ಎಂಬುದು ರಾಷ್ಟ್ರವಾಚಕವಾಗುವುದರ ಬದಲು  ಮತದ ಹೆಸರಲ್ಲಿ ಹೆಚ್ಚು ಉಪಯೋಗವಾಗುತ್ತಿದೆ.
ಆದರೆ ಈ ದೇಶದಲ್ಲಿಹುಟ್ಟಿರುವ ಎಲ್ಲರೂ ಕೂಡ ಅವರ ಪೂಜಾ ಪದ್ದತಿ ಯಾವುದೇ ಇರಲಿ, ತಮ್ಮನ್ನು ತಾವು  ರಾಷ್ಟ್ರವಾಚಕವಾದ “ಹಿಂದು” ಎಂದು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡಬೇಕು. ಕಾರಣ ಅಂಥಹ ದೇವನಿರ್ಮಿತ ದೇಶದಲ್ಲಿ ನಮ್ಮ ಜನ್ಮ ವಾಗಿದೆ.  ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ.