ಕಳೆದ ನಾಲ್ಕು ತಿಂಗಳಿನಿಂದ ಪ್ರತೀ ಭಾನುವಾರ ಹಾಸನದ ಸ್ಥಳೀಯ ಪತ್ರಿಕೆ "ಜನಮಿತ್ರದಲ್ಲಿ" "ಎಲ್ಲರಿಗಾಗಿ ವೇದ" ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆಯುತ್ತಿರುವೆ. ಅದನ್ನು ಗಮನಿಸಿದ ಮಿತ್ರರೊಬ್ಬರು ನೀವು ನಿಮ್ಮ ಬ್ಲಾಗ್ ನಲ್ಲಿ ಇದನ್ನು ಯಾಕೆ ಪೋಸ್ಟ್ ಮಾಡುತ್ತಿಲ್ಲವೆಂದು ಕೇಳಿದರು.ನನ್ನ ಮುಖ್ಯ ಬ್ಲಾಗ್ ಮತ್ತು ವೆಬ್ಸೈಟ್ "ವೇದಸುಧೆ" ಯಲ್ಲಿ ಶ್ರೀ ಸುಧಾಕರ ಶರ್ಮರ ಗಹನವಾದ ಆಡಿಯೋ ಗಳಿರುವುದರಿಂದ ಈಬರಹಗಳನ್ನು ಅಲ್ಲಿ ಪ್ರಕಟಿಸುವ ಬದಲು ಇಲ್ಲಿ ಪ್ರಕಟಿಸುತ್ತಿರುವೆ. ಈಗಾಗಲೇ ಬರೆದಿರುವ ಹದಿನೇಳು ಕುಸುಮಗಳನ್ನು ಆಗಿಂದಾಗ್ಗೆ ಪ್ರಕಟಿಸುವೆ. ಇವೆಲ್ಲಾ ಮುಗಿದ ನಂತರ ಪ್ರತೀ ಭಾನುವಾರ ಈ ಲೇಖನ ಮಾಲೆ ಮುಂದುವರೆಯುತ್ತದೆ. ಓದುಗರ ಪ್ರೋತ್ಸಾಹ ಮತ್ತು ಅಭಿಪ್ರಾಯವನ್ನು ನಿರೀಕ್ಷಿಸುವೆ. ವೇದವು ಗಹನವಾದ ವಿಷಯವಾದ್ದರಿಂದ ಓದುಗರಿಂದ ಪ್ರಶ್ನೆಗಳಿದ್ದರೆ ಉತ್ತರಿಸುವ ಪ್ರಯತ್ನ ಮಾಡಲಾಗುವುದು. ಹೆಚ್ಚಿನ ಸಹಾಯಕ್ಕೆ ನಮ್ಮೊಡನೆ ಶ್ರೀ ಸುಧಾಕರಶರ್ಮರು ಇದ್ದೇ ಇರುತ್ತಾರೆ.
ವಿಷಯ ಪ್ರವೇಶಕ್ಕೆ ಮುಂಚೆ:
ಈ ಮಾಲಿಕೆಯ ಆರಂಭದಲ್ಲಿಯೇ ಒಂದು ಮಾತನ್ನು ಓದುಗರಲ್ಲಿ ಸ್ಪಷ್ಟಪಡಿಸಿಬಿಡುವೆ.
ಈ ಮಾಲಿಕೆಯ ಉದ್ಧೇಶವೆಂದರೆ “ವೇದ” ಎಂದರೆ “ಇದು ನಮ್ಮಂತಹ
ಸಾಮಾನ್ಯರಿಗಲ್ಲ” …ವೇದವನ್ನು ತಿಳಿಯಲು ಸಂಸ್ಕೃತದ
ಜ್ಞಾನ ಇರಬೇಕು…ವೇದ ಎಂದರೆ ಪೂಜೆ ಪುನಸ್ಕಾರಕ್ಕಾಗಿ
ಇರುವ ಮಂತ್ರಗಳು… ಎಲ್ಲರಿಗೂ ವೇದವನ್ನು ಓದುವ ಅರ್ಹತೆ ಇಲ್ಲ…ಹೆಂಗಸರು ಓದಬಾರದು…ಯಾವುದೋ
ಒಂದು ವರ್ಗದವರು ಮಾತ್ರ ಓದಬೇಕು…ಇತ್ಯಾದಿ…ಇತ್ಯಾದಿ…ವಿಚಾರಗಳು ಬಹುಪಾಲು ಜನರಲ್ಲಿ ಸಾಮಾನ್ಯವಾಗಿ
ಬೇರೂರಿದೆ. ಅದಕ್ಕೆ ಹಲವಾರು ಕಾರಣಗಳು ಇವೆ .ಕಾರಣಗಳು ಏನೇ ಇರಲಿ, ಈ ಲೇಖನದ ಉದ್ಧೇಶವೆಂದರೆ ವೇದವೆಂದರೆ
ಇದು “ಅಸಾಮಾನ್ಯರಿಗೆ”ಎನ್ನುವ ಭಾವನೆಯನ್ನು ಕಿತ್ತುಹಾಕಿ ಎಲ್ಲಾ ಮಾನವರ ನೆಮ್ಮದಿಯ ಬದುಕಿಗಾಗಿ ಇರುವ
ಅರಿವಿನ ಭಂಡಾರ ಎಂಬುದನ್ನು ಕೆಲವು ವೇದ ಮಂತ್ರವನ್ನು
ಆಧರಿಸಿ ಸರಳವಾದ ಮಾತುಗಳಲ್ಲಿ ನನ್ನಂತಹ “ಸಾಮಾನ್ಯನಿಂದ ಸಾಮಾನ್ಯರಿಗೆ” ತಿಳಿಸುವುದೇ ಆಗಿದೆ. ಈ ಮಾಲಿಕೆಯು ಮುಂದುವರೆಯುವಾಗ ವೇದ
ಪಂಡಿತರುಗಳು ಹಲವು ಭಾಷ್ಯಗಳ ಆಧಾರದಮೇಲೆ ಒಂದೇ ಮಂತ್ರಕ್ಕೆ ಬೇರೆಯ ಅರ್ಥವನ್ನೂ ನೀಡುವ ಅವಕಾಶಗಳು
ಇದ್ದೇ ಇದೆ. ಆದರೆ ವೇದ ಪಂಡಿತರಲ್ಲಿ ನನ್ನ ಮನವಿ ಏನೆಂದರೆ ವೇದವು ಸಾರ್ವಕಾಲಿಕ, ಸಾರ್ವಜನಿಕ ಮತ್ತು
ಸಾರ್ವ ಭೌಮ , ಎಂಬುದನ್ನು ವೇದ ಮಂತ್ರಗಳಲ್ಲೇ ನಿರೂಪಿಸಿದೆ. ಆದರೆ ಅದಕ್ಕೆ ಭಾಷ್ಯವನ್ನು ಬರೆಯುವಾಗ
ಅಂದಿನ ಸಾಮಾಜಿಕ ಜೀವನಕ್ಕನುಗುಣವಾಗಿ ವೇದಮಂತ್ರವನ್ನು ಅರ್ಥೈಸಿದ್ದಾರೆಂಬುದು ಗಮನದಲ್ಲಿರಬೇಕು.ಆದರೆ
ಇಂದಿನ ಕಾಲಘಟ್ಟದಲ್ಲಿ ಯಾಸ್ಕಾಚಾರ್ಯರ ನಿರುಕ್ತದ
ಆಧಾರದಿಂದ ವೇದ ಮಂತ್ರಗಳನ್ನು ಬಿಡಿಸಿಕೊಂಡಾಗ ಮಾತ್ರ
ವೇದವು ಇಂದಿನ ಕಾಲಕ್ಕೂ ,ಮುಂದಿನಕಾಲ ಘಟ್ಟಕ್ಕೂ ಸಹ ಹೇಗೆ ಉಪಯುಕ್ತ ಎಂಬ ಅರಿವು ಮೂಡುತ್ತದೆ. ಈಗಾಗಲೇ ನಿರುಕ್ತದ ಆಧಾರದಲ್ಲಿ ವೇದಮಂತ್ರಗಳಿಗೆ ಅರ್ಥವನ್ನು
ಬಿಡಿಸಿ ಸರ್ವಮಾನವರ ಹಿತಕ್ಕಾಗಿ ಉಪಯೋಗವಾಗುವಂತೆ ಬರೆದಿರುವ ಪಂಡಿತ್ ಸುಧಾಕರ ಚತುರ್ವೇದಿಯವರ “ ವೇದೋಕ್ತ
ಜೀವನ ಪಥ” ಮತ್ತು ವೇದಾಧ್ಯಾಯೀ ಸುಧಾಕರಶರ್ಮರು ನನ್ನ ಅಂತರ್ಜಾಲ ತಾಣವಾದ vedasudhe.com ಗಾಗಿ ನೀಡಿರುವ
ಉಪನ್ಯಾಸಗಳೇ ನನ್ನ ಬರವಣಿಗೆಗೆ ಆಧಾರವೆಂಬುದನ್ನು ಸವಿನಯವಾಗಿ ತಿಳಿಸಬಯಸುವೆ.ಅಲ್ಲದೆ ಸರ್ವಜನರ ಹಿತಕ್ಕಾಗಿ
ಬರುವ ಯಾರದೇ ಸಲಹೆಗಳನ್ನು ಸವಿನಯವಾಗಿ ಸ್ವೀಕರಿಸಲು ಬದ್ಧನಾಗಿರುವೆ. ಇನ್ನು ಒಂದೊಂದೇ ಹೆಜ್ಜೆ ಹಾಕುತ್ತಾ
ಸಾಗೋಣ.
ವೇದ ಎಂದರೇನು?
ವೇದ
ಎಂದರೆ ಜ್ಞಾನ. ಇಷ್ಟು ಸರಳವಾಗಿರುವ ಅರ್ಥವನ್ನು ಅದೆಷ್ಟು
ಕಠಿಣ ಮಾಡಿಬಿಟ್ಟಿದ್ದಾರೆ! ಹಾಗೆನಿಸೋದಿಲ್ಲವೇ? ಜ್ಞಾನ ಎಂದರೆ ಅರಿವು. ಎಂತಹ ಅರಿವು ? ಸುಂದರ ಬದುಕು
ನಡೆಸುವುದು ಹೇಗೆಂಬ ಅರಿವು.ಮುಂದೆ ಒಂದೊಂದೇ ಮಂತ್ರವನ್ನು ಬಿಡಿಸುತ್ತಾ ಹೋಗುವಾಗ “ ಇದು ಪೂಜೆಯ ಮಂತ್ರವೇ?
ಶ್ರಾದ್ಧ ಕರ್ಮಗಳಿಗೆ ಮಾತ್ರ ಪಠಿಸುವ ಮಂತ್ರವೇ? ಹವನ ಹೋಮಗಳಿಗೆ ಮಾತ್ರ ಸೀಮಿತವೇ? ಎಲ್ಲವೂ ಅರ್ಥವಾಗುತ್ತಾ
ಹೋಗುತ್ತದೆ.
“ಎಲ್ಲರಿಗಾಗಿ ವೇದ” ಎಂಬುದಕ್ಕೆ ಆಧಾರವಾದ ವೇದ ಮಂತ್ರಗಳು, ಮನುಷ್ಯನ ನೆಮ್ಮದಿಯ ಬದುಕಿಗೆ ವೇದವು ಏನು
ಸೂತ್ರವನ್ನು ಕೊಡುತ್ತದೆ? ಇವನು ಶ್ರೇಷ್ಠ ಇವನು ಕನಿಷ್ಠನೆನ್ನಲು ವೇದದಲ್ಲಿ ಅವಕಾಶವಿದೆಯೇ?
ಎಲ್ಲವನ್ನೂ ಮುಂದಿನ ಬರಹಗಳಲ್ಲಿ ನೋಡೋಣ.
ವೇದವನ್ನು ಯಾರು ಬರೆದರು?
ವೇದವು
ಅಪೌರುಷೇಯ.ಇದನ್ನು ಮನುಷ್ಯರು ಬರೆದದ್ದಲ್ಲ. ಅಂದರೆ
ಹೇಗೆ ಬಂತು? ಎಂಬುದೇ ತಾನೇ ಮುಂದಿನ ಪ್ರಶ್ನೆ! ವೇದವನ್ನು ಋಷಿಗಳು ತಮ್ಮ ತಪೋ ಬಲದಿಂದ ಕಂಡುಕೊಂಡರು.
“ ಋಷಿರ್ದರ್ಶನಾತ್” ಎನ್ನುತ್ತಾರೆ. ಅಂದರೆ ಋಷಿಗಳು ಕಂಡುಕೊಂಡ ಸತ್ಯ. ಋಷಿಗಳು ಅಂತರ್ಮುಖಿಗಳಾಗಿ ತಪಸ್ಸನ್ನು ಆಚರಿಸಿದಾಗ
ಭಗವಂತನಿಂದಲೇ ಕಂಡುಕೊಂಡ ಸತ್ಯವೇ ವೇದಗಳು. ಮಾನವ
ಜನ್ಮ ಯಾವಾಗ ಆಯ್ತೋ ಆಗಿನಿಂದಲೇ ವೇದಗಳು ಇವೆ. ವಿಜ್ಞಾನಿಯೊಬ್ಬ ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ. ಯಾವುದೇ ವಸ್ತುವನ್ನು ಮೇಲೆ ಎಸೆದರೂ ಭೂಮಿಯು ಅದನ್ನು ಆಕರ್ಶಿಸುವುದರಿಂದ ಅದು
ಭೂಮಿ ಮೇಲೆ ಬೀಳುತ್ತದೆ. ವಿಜ್ಞಾನಿಯು ಈ ಸತ್ಯವನ್ನು ಕಂಡುಹಿಡಿಯುವ ಮುಂಚೆಯೂ ಯಾವುದೇ ಮೇಲೆ ಎಸೆದ ವಸ್ತು ಭೂಮಿಗೆಗೆ ಬೀಳುತ್ತಲೇ ಇತ್ತಲ್ಲವೇ?
ಆದರೆ ವಿಜ್ಞಾನಿಯು ಈ ನಿಯಮವನ್ನು ತನ್ನ ಸಂಶೋಧನೆಯಿಂದ ಕಂಡುಕೊಂಡನು. ಹಾಗೆಯೇ ನಮ್ಮ ಋಷಿಮುನಿಗಳು ಅದಾಗಲೇ ಇದ್ದ ವೇದ ಜ್ಞಾನವನ್ನು ತಮ್ಮ ತಪಸ್ಸಿನ ಬಲದಿಂದ ಕಂಡುಕೊಂಡರು.
ಇಷ್ಟನ್ನು ವೇದದ ಉಗುಮದ ಬಗ್ಗೆ ಅರಿತು ಕೊಂಡರೆ ಸಾಕು. ಯಾವ್ಯಾವ ಮಂತ್ರವನ್ನು ಯಾವ ಯಾವ ಋಷಿಗಳು ಕಂಡುಕೊಂಡರೆಂಬುದನ್ನು ಆಯಾಮಂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ವೇದವ್ಯಾಸರು ಅಲ್ಲಲ್ಲಿ ಹರಡಿದ್ದ ವೇದ ಜ್ಞಾನವನ್ನು ನಾಲ್ಕು ಭಾಗಗಳಲ್ಲಿ ಕ್ರಮವಾಗಿ ಹಂಚಿದರು. ಆದರೆ ನಾಲ್ಕೂ ವೇದಗಳು ಭಗವಂತನಿಂದಲೇ ಪ್ರಕಟವಾದವೆಂಬುದನ್ನು ಒಂದು
ವೇದ ಮಂತ್ರವೇ ಸಾರುತ್ತದೆ. ಆ ಮಂತ್ರದಿಂದಲೇ ಈ ಮಾಲಿಕೆಯನ್ನು ನಾಳೆ ಮುಂದುವರೆಸೋಣ.
No comments:
Post a Comment