ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Sunday, 30 December 2012

ಇವನನ್ನು ನಾಸ್ತಿಕನೆನ್ನುತ್ತೀರಾ?

                            

        ಈ ಘಟನೆ ನಡೆದು ನಾಲ್ಕೈದು ವರ್ಷಗಳೇ ಕಳೆದಿವೆ. ಪೂಜಾಗೃಹದಲ್ಲಿ ದೇವರಿಗೆ ಅಭಿಶೇಕ ಮಾಡುತ್ತಿದ್ದೆ. ಪುಟ್ಟ ಪುಟ್ಟ ನಾಲ್ಕೈದು ಬೆಳ್ಳಿ ವಿಗ್ರಹಗಳು! ಅದೇಕೋ ಮನದಲ್ಲಿ ದುಸ್ಸೆಂದು ಒಂದು ವಿಚಾರ ಬರಬೇಕೇ!! “ಅಯ್ಯೋ ,ಇದೇನು ನಾನು ಮಕ್ಕಳಾಟ ಆಡ್ತಾ ಇದ್ದೀನಾ? ಇದ್ದಕ್ಕಿದ್ದಂತೆ ನನ್ನ ಬಾಲ್ಯದ ನೆನಪುಗಳೆಲ್ಲಾ ಕಣ್ಮುಂದೆ ಸುಳಿದಾಡಿದವು. ಸಮಾನ ವಯಸ್ಸಿನ ಬೇರೆ ಮಕ್ಕಳೊಡನೆ “ಅಮ್ಮನ ಆಟ” ಆಡುತ್ತಿದ್ದ ನೆನಪುಗಳು! ಹೆಣ್ಣು ಗಂಡು ಎಂಬ ಭೇದವಿಲ್ಲದೆ ನಾಲ್ಕೈದು ಮಕ್ಕಳನ್ನು ಒಟ್ಟುಗೂಡಿಸಿ “ಅವಳು ಅಮ್ಮ, ನಾನು ಅಪ್ಪ, ಇವನು ಮಗ,ಅವಳು ಮಗಳು” ಎಲ್ಲರಿಗೂ ನಾಮಕರಣ ಮಾಡಿ ಆಟ ಆರಂಭಮಾಡ್ತಾ ಇದ್ದ ಆ ದಿನದ ನೆನಪುಗಳು! ಅಪ್ಪ ಅಂದರೆ ಅಂಗಡಿಗೆ ಹೋಗಿ ಸಾಮಾನು ತರಬೇಕು, ತೋಟಕ್ಕೆ ಹೋಗಿ ಬರಬೇಕು, ಅಮ್ಮ ಮನೆ ಕೆಲಸ ಮಾಡಬೇಕು, ಅಡಿಗೆ ಮಾಡಬೇಕು………. ಎಲ್ಲ ಯಥಾಪ್ರಕಾರ ಸಂಸಾರವೇ. ಅವಳು ಹೆಂಡ್ತಿ, ನಾನು ಗಂಡ. ಮಗ-ಮಗಳು. ಮನೆ ಅಂದಮೇಲೆ ದೇವರ ಮನೆ [ಈಗ ಪೂಜಾ ಗೃಹ ಅಂತಾರೆ] ಇರಲೇ ಬೇಕಲ್ಲಾ! ನನ್ನ ಕೆಲಸ ಅಂದರೆ ಎಲ್ಲಕ್ಕಿಂತ ಹೆಚ್ಚಾಗಿ ದೇವರ ಪೂಜೆ ಮಾಡೋದು. ಮಕ್ಕಳು ನನಗೆ ಅಸ್ಸಿಸ್ಟ್ ಮಾಡಬೇಕು. ನಮ್ಮನೇಲೀ ಇದ್ದ ಆಟದ ಗೊಂಬೆಗೇ ಅಭಿಶೇಕ ಮಾಡಿ ಮಂಗಳಾರತೀ ಮಾಡಿ ಎಲ್ಲಾರಿಗೂ ಕೊಡುವಾಗ ಕಾಣುತ್ತಿದ್ದ ಧನ್ಯತೆಯ ಭಾವ !! ಪೂಜೆ ನಂತರ ತೀರ್ಥ ಪ್ರಸಾದವೂ ತಪ್ಪುತ್ತಿರಲಿಲ್ಲ.ಅಮ್ಮನ್ನ ಕಾಡಿಬೇಡಿ ಎರಡು ಬಾಳೆಹಣ್ಣು, ಒಂಚೂರು ತೆಂಗಿನಕಾಯಿ, ಸ್ವಲ್ಪಾ ಹಾಲು, ಮೊಸರು, ಒಂಚೂರು ಬೆಲ್ಲ ಎಲ್ಲಾ ತಗೊಂಡು ಬರುತ್ತಿದ್ದೆ. ತೀರ್ಥ ಮಾಡಿ ,ತುಪ್ಪಾಳೆಹಣ್ಣು ಮಾಡಿ ಹಂಚುತ್ತಾ ಇದ್ದೆ.!! ಹಾಡು, ಶ್ಲೋಕ, ಮಂತ್ರ, ಭಜನೆ….ಅಬ್ಬಬ್ಭಾ! ಮಂಗಳಾರತಿ ಮಾಡುವ ಮುಂಚೆ ಅದೇನು ಭಜನೆಯ ಆರ್ಭಟವೋ! ಕೊನೇಲೀ ಮಂಗಳ, ನಂತರ ಲಾಲಿ ಹಾಡಿ ದೇವರನ್ನು ಮಲಗಿಸಿಬಿಡ್ತಾ ಇದ್ವು!!..............................

 ಎಲ್ಲಾ ನೆನಪುಗಳೂ ಮನದಲ್ಲಿ ಸುಳಿದು ಅಭಿಶೇಕವನ್ನು ಅಷ್ಟಕ್ಕೇ ನಿಲ್ಲಿಸಿದೆ.ಅರೇ, ಬಾಲ್ಯದ ಮಕ್ಕಳಾಟವನ್ನು ಇವತ್ತೂ ಮಾಡ್ತಾ ಇದ್ದೀನಾ? ಕಣ್ಮುಚ್ಚಿ ಕೂತೆ. ಅವತ್ತಿನಿಂದ ಇವತ್ತಿನವರಗೂ ನನ್ನ ಪೂಜೆ ಅಂದರೆ ಕಣ್ಮುಚ್ಚಿ ಕುಳಿತು ಭಗವಂತನ ಸ್ಮರಣೆ ಮಾಡುವುದೇ ಆಗಿದೆ. ಅಭಿಶೇಕ ,ಮಂಗಳಾರತಿ ಮಾಡುವುದೇ ಇಲ್ಲಾ, ಎಂದು ಹಠವನ್ನೇನೂ ತೊಟ್ಟಿಲ್ಲ. ಖುಷಿಗೆ ಮಾಡಿದ್ದುಂಟು.
        ಅಭಿಶೇಕ ಅರ್ಧಕ್ಕೆ ನಿಲ್ಲಿಸಿ ಕಣ್ಮುಚ್ಚಿ ಕುಳಿತ ಘಟನೆಯನ್ನು ನನ್ನ ಮಿತ್ರನಿಗೆ ಹೇಳಿದೆ. “ಎಲ್ಲಾ ಕಡೆಯಲ್ಲೂ ದೇವರನ್ನು ಕಾಣುವ ನಿಮಗೆ ಆ ವಿಗ್ರಹದಲ್ಲಿ ದೇವರು ಕಾಣದೆ ಹೋದನೇ? ಅವರ ಮಾತಿನಲ್ಲಿ ವ್ಯಂಗ್ಯ ಅಡಕವಾಗಿತ್ತು. “ಈ ಬಗ್ಗೆ ಚರ್ಚೆಯನ್ನು ಈಗ ಮಾಡುವುದಿಲ್ಲ. ಕಾರಣ ನಿಮ್ಮ ಈ ಮಾನಸಿಕ ಸ್ಥಿತಿಯಲ್ಲಿ ನಿಮಗೆ ಕನ್ವಿನ್ಸ್ ಮಾಡುವುದು ಕಷ್ಟ. ನಿಧಾನವಾಗಿ ಯಾವಾಗಲಾದರೂ ಮಾತನಾಡೋಣ, ಎಂದೆ. ಆದಿನ ಇವತ್ತು ಬಂತು. ಅವರೊಡನೆ ನೇರವಾಗಿ ಮಾತನಾಡುತ್ತಿಲ್ಲ. ಆದರೆ ನನ್ನ ಅಭಿಪ್ರಾಯವನ್ನು ನಾಲ್ಕುಜನರೊಡನೆ ಹಂಚಿಕೊಂಡಾಗ ಅವರಿಗೂ ವಿಷಯ ತಲುಪದೇ ಇರದು. ಈಗ ಈ ವಿಚಾರಕುರಿತು ಸ್ವಲ್ಪ ಚಿಂತನ-ಮಂಥನ ನಡೆಸೋಣ. ಈ ಚರ್ಚೆಯಲ್ಲಿ ಗೆಲವು ನನ್ನದೇ ಆಗಬೇಕೆಂಬ ಶರತ್ತೇನೂ ಇಲ್ಲ. ಅಂತಿಮವಾಗಿ ಸತ್ಯದ್ದೇ ಗೆಲುವಾಗುವುದರಲ್ಲಿ ಸಂಶಯವಿಲ್ಲ.
ನನ್ನ ಮಿತ್ರನ ಪ್ರಶ್ನೆ ಏನು? ಎಲ್ಲೆಲ್ಲೂ ಇರುವ ಭಗವಂತನು ಈ ಪುಟ್ಟ ಮೂರ್ತಿಯಲ್ಲಿಲ್ಲದೇ ಹೋದನೇ?
ಖಂಡಿತವಾಗಿಯೂ ಆ ಪುಟ್ಟ ಮೂರ್ತಿಯಲ್ಲಿ ದೇವರಿಲ್ಲ, ಎಂದು ನಾನು ಹೇಳುವುದಿಲ್ಲ. ಆ ಮೂರ್ತಿಯಲ್ಲಷ್ಟೇಅಲ್ಲ, ಮಂಗಳಾರತಿ ಮಾಡಲಿಟ್ಟಿರುವ ತಟ್ಟೆಯಲ್ಲಿ, ಅಭಿಶೇಕದ ಸಾಮಗ್ರಿಯಲ್ಲಿ, ನಾನು ಕುಳಿತಿದ್ದ ಚಾಪೆಯಲ್ಲಿ ಎಲ್ಲೆಲ್ಲೂ ದೇವರಿದ್ದಾನೆ. ಅಂದಮೇಲೆ ದೇವರಿಂದ ದೇವರಿಗೆ ಮಂಗಳಾರತಿ, ದೇವರನ್ನೇ ಅಭಿಶೇಕವಾಗಿ ಮಾಡುತ್ತಿರುವ ನನ್ನಲ್ಲೂ ದೇವರಿದ್ದಾನೆ. ಓದುತ್ತಿರುವ ನಿಮ್ಮಲ್ಲೂ ದೇವರಿದ್ದಾನೆ. ಆ ದೇವರನ್ನು ಚಿಕ್ಕ ವಿಗ್ರಹಮಾಡಿ ಕುಬ್ಜಗೊಳಿಸಲು ನನಗೆ ಇಷ್ಟವಾಗಲಿಲ್ಲ. ಬಾಲ್ಯದಲ್ಲೇನೋ ಮಕ್ಕಳಾಟ ಆಡಿ ತೀರ್ಥ ಕುಡಿದು ಪ್ರಸಾದ ತಿಂದಿದ್ದಾಯ್ತು. ಅಷ್ಟೇಕೇ , ಅವನನ್ನು ಮಲಗಿಸಿದ್ದೂ ಆಯ್ತು!!. ಅಬ್ಭಾ ಈಗ ನನಗೆ ನಗು ಬರುತ್ತದೆ, ಯಾಕೆ ಗೊತ್ತಾ? ಈ ಬ್ರಹ್ಮಾಂಡದ ಎಲ್ಲಾ ಆಟದ ಸೂತ್ರದಾರನನ್ನು ನಾನು ಲಾಲಿ ಹೇಳಿ ಮಲಗಿಸಿ ಬಿಟ್ಟರೆ, ಈ ಬ್ರಹ್ಮಾಂಡದ ಗತಿ!!! ದೇವರೇ ಗತಿ, ಎನ್ನುವಂತಿಲ್ಲ. ಅವನನ್ನು ಮಲಗಿಸಿದ್ದಾಗಿದೆಯಲ್ಲಾ!!!
ಹೀಗೆ ಮನದಲ್ಲಿ ಮೂಡಿದ ಭಾವನೆಗಳನ್ನು ಗೆಳೆಯರೊಡನೆ ಹಂಚಿಕೊಂಡಾಗ “ನಿನಗೆ ಆರ್ಯ ಸಮಾಜದವರು ಬ್ರೈನ್ ವಾಶ್, ಮಾಡಿದ್ದಾರೆ! “ ಅಂತಾರೆ. ಹೌದು, ಆರ್ಯಸಮಾಜ ಹಲವು ಪುಸ್ತಕಗಳನ್ನು ನಾನು ಓದುತ್ತಿರುತ್ತೇನೆ. ಆದರೆ ಅವರ ಹತ್ತು ನಿಯಮಗಳಿವೆ, ಅವನ್ನು ಪಾಲಿಸಿದರೆ ಮಾತ್ರ ಅವನು ಆರ್ಯಸಮಾಜಿ, ಎಂದು ಆರ್ಯಸಮಾಜವು ಒಪ್ಪಿಕೊಳ್ಳುತ್ತದೆ. ಅದೊಂದು ಕಠಿಣ ವ್ರತ .ಅದು ನನ್ನ ಕೈಲಾಗದ ಕೆಲಸ. ಆದರೆ ನನ್ನ ಅಂತರಾಳದಲ್ಲಿ ಮೂಡುವ ತುಡಿತಕ್ಕೆ ಬೆಲೆಕೊಡುವ ನಾನು “ನೀವು ಹೀಗಿರಬೇಕೆಂದು ಹೇಳುವುದಿಲ್ಲ. ಸತ್ಯವಾಗಿ ಕಂಡದ್ದನ್ನು ಬರೆಯಲು ,ಹೇಳಲು ಹಿಂಜೆರೆಯುವುದಿಲ್ಲ. ಆದರೆ ಯಾರೊಬ್ಬರಿಗೂ ಹೀಗೆಯೇ ಇರಬೇಕೆಂದು ಒತ್ತಾಯ ಮಾಡುವುದೂ ಇಲ್ಲ. ಕೆಲವೆಲ್ಲಾ ಬಾಲಿಶವಾಗಿ ಕಂಡಿದ್ದನ್ನು ಒಪ್ಪಲು ನನ್ನ ಮನ ಹಿಂದೇಟು ಹೊಡೆದಾಗ ನನ್ನ ಅಂತರಾಳ ದ ಕರೆಗೆ ಓಗೊಟ್ಟು ನನ್ನ ಪಾಡಿಗೆ ನಾನಿರುವೆ.
ಈಗ ನೀವೇನಂತೀರಿ? ಎಂದು ಕೇಳುವುದಿಲ್ಲ. ಕಾರಣ ಈ ಬರಹ ಓದುವ ಪ್ರತಿಶತ 99ಜನರಲ್ಲಿ ನಾನೂ ಸೇರಿದಂತೆ ನೂರಾರು ವರ್ಷಗಳಿಂದ ಬೆಳೆದುಬಂದಿರುವ ಆಚರಣೆಗಳು, ಸಂಪ್ರದಾಯಗಳ ಬಂಧನಕ್ಕೆ ನಾವೆಲ್ಲಾ ಒಳಗಾಗಿರುವುದರಲ್ಲಿ ಸಂಶಯವಿಲ್ಲ. ಯಾವ ಆಚರಣೆಗಳನ್ನೂ ಯಾಕೆ ಹೀಗೆ? ಎಂದು ಕೇಳುವಂತಿಲ್ಲ. ಕೇಳಿದರೆ ಅವನು ತಲೆಹರಟೆ. ಯಾಕೆ ಗೊತ್ತಾ? ನಮಗೆ ಅದರ ಅರ್ಥ ಗೊತ್ತಿಲ್ಲ. ಆದ್ದರಿಂದ ಹೀಗೊಂದು ಮಾತನ್ನು ಸೃಷ್ಟಿ ಮಾಡಿದವರೂ ನಾವೇ? ಏನು ಗೊತ್ತಾ” ಋಷಿ ಮೂಲ, ನದಿ ಮೂಲ,…….ಕೇಳಬೇಡಿ. ಯಾಕೆ ಗೊತ್ತಾ? ಒಬ್ಬ ಋಷಿ ಹತ್ತಾರು ವರ್ಷಗಳ ಹಿಂದೆ ಕಟುಕನಾಗಿದ್ದಿರಬಹುದು.ಇನ್ನೂ ಏನೋ ಆಗಿರಬಹುದು, ನದಿಯೊಂದರ ಮೂಲ ಹುಡುಕುತ್ತಾ ಹೋದರೆ ಅದರಲ್ಲಿ ಕೊಚ್ಚೆ ನೀರು ಸೇರುವುದನ್ನು ಕಣ್ಣಾರೆ ಕಾಣಬೇಕಾಗುತ್ತದೆ!! ಆದರೆ ವೇದವು ಹೇಳುತ್ತದೆ …..

“ಯೂಯಮ್ ತತ್ ಸತ್ಯಶವಸ ಆವಿಶ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್- 1.86.9]
ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನಿಮ್ಮ ಸ್ವಸಾಮರ್ಥ್ಯದಿಂದ ಸತ್ಯವನ್ನುಆವಿಶ್ಕರಿಸಿ,ದುಷ್ಕಾಮನೆಯನ್ನು ನಿಮ್ಮ ಜ್ಞಾನ ಜ್ಯೋತಿಯಿಂದ ಸೀಳಿಹಾಕಿರಿ
ಅಷ್ಟೇ ಅಲ್ಲ, ಇನ್ನೊಂದು ಕಡೆ ವೇದವು ಕರೆ ಕೊಡುತ್ತದೆ” ಯಾವುದು ಪ್ರಾಚೀನವೋ, ಯಾವುದು ನೂತನವೋ , ಎಲ್ಲಕ್ಕೂ ಕಿವಿಗೊಡಿ, ಯಾವುದು ನಿಮ್ಮ ಅಂತ: ಕರಣದಲ್ಲಿ ಮೂಡುತ್ತದೋ, ಅದನ್ನೂ ಗಮನಿಸಿ, ವಿದ್ವಾಂಸರುಗಳು ತಿಳಿಸುವ ಸದ್ವಿಚಾರಗಳಿಗೂ ಕಿವಿಗೊಡಿ, ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗುವುದೋ ಆ ಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ. ವೇದದ ಕರೆ ನೋಡಿ, ಹೇಗಿದೆ! ಆದರೆ ಇಂದಿನ ಸಮಾಜದಲ್ಲಿ ಏನಾಗಿದೆ ಎಂದರೆ ಸಂಪ್ರದಾಯಕ್ಕೆ ಶರಣಾಗಿರುವವರು “ಆಸ್ತಿಕ”ರೆನಿಸಿಕೊಳ್ಳುತ್ತಾರೆ. ಅವರು ಯಾವ ಪ್ರಶ್ನೆ ಮಾಡುವಂತಿಲ್ಲ. ಅವರಿಗೂ ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ನಾಸ್ತಿಕರು! ನೋಡಿ ಹೇಗಿದೆ ನಮ್ಮ ಚಿಂತನೆ!! ನಿಜವಾಗಿ ಈ ನಾಸ್ತಿಕ ಎಂದು ಹಣೆಪಟ್ಟಿ ಹಚ್ಚಿಸಿಕೊಳ್ಳುವವನು ದೇವರ ಅಸ್ತಿತ್ವವನ್ನು ನಂಬುತ್ತಾನೆ. ಆದರೆ ಸರ್ವಾಂತರ್ಯಾಮಿಯಾದ ಆ ಭಗವಂತನಿಗೆ ರೂಪಕೊಟ್ಟು ಕುಬ್ಜನನ್ನಾಗಿ ಮಾಡಲಾರ. ಅಸತ್ಯ ಆಚರಣೆಗಳನ್ನು ಒಪ್ಪಲಾರ.ಇವನನ್ನ ನಾಸ್ತಿಕನೆನ್ನುತ್ತೀರಾ? ಈಗ ಹೇಳಿ ನೀವೇನಂತೀರಾ?

Saturday, 29 December 2012

ವೇದಭಾರತೀ,ಹಾಸನ-ಚಟುವಟಿಕೆಗಳ ಪರಿಚಯ

ಕವಿ ನಾಗರಾಜರು ಮೊದಲು ಸ್ವಯಂ ನಿವೃತ್ತಿ ಪಡೆದರು. ನಾನು ಅವರನ್ನು ಹಿಂಬಾಲಿಸಿದೆ. ಸಾಮಾನ್ಯವಾಗಿ ನಿವೃತ್ತರ ಜೀವನ ನೋಡಿದ್ದೀರಲ್ಲಾ! ಪಾಪ! ಕಾಲ ಕಳೆಯುವುದು ಬಲು ಕಷ್ಟ. ಆದರೆ ನಮಗೆ  ದಿನದಲ್ಲಿ ಇನ್ನೂ ಮೂರ್ನಾಲ್ಕು ಗಂಟೆಗಳಿದ್ದರೂ ಅದರ ಸದ್ವಿನಿಯೋಗ ವಾಗುತ್ತೆ.ಅದಕ್ಕೆ ಕಾರಣ ನಾವು ಆರಂಭಿಸಿದ ವೇದಭಾರತೀ. 
                    ನಾನು ನಿವೃತ್ತಿ ತೆಗೆದುಕೊಳ್ಳುವಾಗಲೇ ಹೀಗೇ ನನ್ನ ಮುಂದಿನ ಜೀವನ ಸಾಗಬೇಕೆಂದು ನಿರ್ಧರಿಸಿದ್ದೆ. ಅದಕ್ಕೆ ಭಗವಂತನ ಆಶೀರ್ವಾದ ದೊರೆಯಿತು.ನಾಗರಾಜ್ ಮತ್ತು ಮಿತ್ರರ ಸಹಕಾರ ದೊರೆಯಿತು. ವಾನಪ್ರಸ್ತ ಜೀವನಕ್ಕೆ ಕಾಡಿಗೆ ಹೋಗದೆ , ಅದಕ್ಕಾಗಿಯೇ ಮನೆಯ ಮೇಲೆ  ಸುಮಾರು ಐವತ್ತು ಅರವತ್ತು ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ  ಒಂದು ಹಾಲ್ ಮತ್ತು ಅಥಿತಿಗಳಿಗಾಗಿ  ಒಂದು ರೂಮ್, ಎರಡು ಶೌಚಾಲಯ[ಒಂದು ರೂಮಿಗೆ ಅಟ್ಯಾಚ್ಡ್ ,ಒಂದು ಹಾಲ್ ಗೆ ಅಟ್ಯಾಚ್ಡ್] ನಿರ್ಮಾಣವಾಯ್ತು.ರಾಮಕೃಷ್ಣಾಶ್ರಮದ ಮತ್ತು ಚಿನ್ಮಯಾ ಮಿಷನ್ನಿನ ಸ್ವಾಮೀಜಿ ಗಳಿಂದ ಒಂದೆರಡು ಸತ್ಸಂಗ ನಡೆಯಿತು. ಕಳೆದ ಆಗಸ್ಟ್ 19 ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ  ಶ್ರೀ ಸುಧರ್ಮ ಚೈತನ್ಯರ ಒಂದು ಸತ್ಸಂಗ ಯೋಜನೆಯಾಗಿತ್ತು. ಆದರೆ  ಸ್ವಾಮೀಜಿಯವರು  ಬೇರೊಂದು ಕಾರ್ಯಕ್ರಮದಲ್ಲಿ ಅನಿವಾರ್ಯವಾಗಿ ಭಾಗವಹಿಸಬೇಕಾಗಿ ಬಂತು.ಆಗ ಅದೇ ದಿನಕ್ಕೆ ಮತ್ತೊಂದು ಕಾರ್ಯಕ್ರಮ ಯೋಜಿಸಿದೆವು.ಅದೇ "ಸಾಪ್ತಾಹಿಕ ವೇದ ಪಾಠದ ಆರಂಭ" ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರನ್ನು ಕರೆಸಿ "ಎಲ್ಲರಿಗಾಗಿ ವೇದಪಾಠ" ವನ್ನು "ವೇದಭಾರತಿಯ" ಆಶ್ರಯದಲ್ಲಿ ಆರಂಭಿಸಿದೆವು.     ನಿತ್ಯವೂ  ವೇದಾಭ್ಯಾಸ ಮಾಡಿದರೆ ಹೇಗೆ? ಎಂದು ಕೆಲವರು ಅಭಿಪ್ರಾಯ ಪಟ್ಟರು. ಕಳೆದ ಮೂರು ವಾರಗಳಿಂದ ಪ್ರತಿದಿನ  ಸಂಜೆ 6.00 ರಿಂದ 7.00ರವರಗೆ ಈಗ ವೇದಾಭ್ಯಾಸವು ನಡೆಯುತ್ತಿದೆ. ಸರಿಯಾಗಿ 6.00ಕ್ಕೆ ಆರಂಭವಾಗುವ ವೇದಾಭ್ಯಾಸದಲ್ಲಿ ಮೊದಲಿಗೆ ಹತ್ತು ನಿಮಿಷ ಧ್ಯಾನ. ನಂತರ ಮುಕ್ಕಾಲು ಗಂಟೆ  ವೇದಾಧ್ಯಾಯೀ ಶ್ರೀ ಅನಂತನಾರಾಯಣರು ವೇದಾಭ್ಯಾಸವನ್ನು ಮಾಡಿಸುತ್ತಿದ್ದಾರೆ. ನಿವೃತ್ತರಾಗಿರುವ ನಾವು ಮಾತ್ರ ಅಲ್ಲ....ಉದ್ಯೋಗ ಮಾಡುವ ಮಾತೆಯರು, ಪುರುಷರು, ವಿದ್ಯಾರ್ಥಿಗಳು ವೇದಾಭ್ಯಾಸಕ್ಕೆ ಬರುತ್ತಾರೆ. ಜಾತಿ/ಮತ/ಲಿಂಗ ಭೇದವಿಲ್ಲದೆ ಎಲ್ಲರಿಗಾಗಿ ನಡೆಯುತ್ತಿರುವ ಈ ವೇದ ಪಾಠವು ಬಲು ನೆಮ್ಮದಿಕೊಟ್ಟಿದೆ.ಈಗಾಗಲೇ ಒಂದು ಸಂಸ್ಕೃತ ಸಂಭಾಷಣಾ ಶಿಬಿರವೂ ಇಲ್ಲಿ  ನಡೆದಿದೆ. ಯೋಗಾಭ್ಯಾಸವೂ ಆರಂಭವಾಗಲಿದೆ. ಅಂದಹಾಗೆ ಅಂತರ್ಜಾಲದಲ್ಲೂ vedasudhe.com ನಲ್ಲಿ  ವೇದಪಾಠವು ನಡೆದಿದೆ. ಅಪೇಕ್ಷಿಸುವ ಸುಮಾರು 35 ಜನರಿಗೆ ಮೇಲ್ ಮೂಲಕವೂ ವೇದಪಾಠವನ್ನು ಕಳಿಸಿಕೊಡಲಾಗುತ್ತಿದೆ








ವೇದ ಸಾಹಿತ್ಯವು ಇಲ್ಲಿ ಮಾರಾಟಕ್ಕೆ ಲಭ್ಯ



ವೇದ ಮತ್ತು ಆಧ್ಯಾತ್ಮಿಕ  ಗ್ರಂಥ ಭಂಡಾರ-ಎಲ್ಲರಿಗೂ ಮುಕ್ತ



ಇಲ್ಲಿ ವೇದಾಭ್ಯಾಸವು  ನಡೆಯುತ್ತದೆ

Wednesday, 12 December 2012

ಅಂತರ್ಜಾಲದ ಮೂಲಕ ವೇದಪಾಠ

ವೇದಪಾಠವನ್ನು ಅಂತರ್ಜಾಲದ ಮೂಲಕ ಆರಂಭ ಮಾಡಿದ್ದೇನೋ ಆಯ್ತು. ಪ್ರಾರಂಭದ ದಿನಗಳಲ್ಲಿ ಕೆಲವರು ಸ್ಪಂಧಿಸಿ ನಮಗೆ ಫೀಡ್ ಬ್ಯಾಕ್ ಕೊಡುತ್ತಿದ್ದರು.ಆದರೆ ಬರುಬರುತ್ತಾ [ಪಾಠವು ನಿಧಾನಗತಿಯಲ್ಲಿ ಸಾಗಿದ್ದುದರ ಪರಿಣಾಮ ಇರಬಹುದು] ಫೀಡ್ ಬ್ಯಾಕ್ ಬರುವುದು ಕ್ರಮೇಣ ನಿಂತು ನನಗೆ ಅನುಮಾನ ಶುರುವಾಯ್ತು. ಆಸಕ್ತಿ ಇಲ್ಲದವರಿಗೆ ನಾನು ಕಳಿಸುತ್ತಿದ್ದೀನೇನೋ ಆಡಿಯೋ ಸಿದ್ಧಪಡಿಸಲು ವೃಥಾ ಶ್ರಮ ಪಟ್ಟು   ಅದು ಯಾರಿಗೂ ಪ್ರಯೋಜನ ವಾಗದಿದ್ದಾಗ ಸುಮ್ಮನೆ ಏಕೆ ಕಷ್ಟ? ಸುಮ್ಮನಾಗಿ ಬಿಡಲೇ ಎಂಬ ಭಾವನೆ ಬಾರದೆ ಇಲ್ಲ. ಆದರೆ ಅಂತಾ ಸಂದರ್ಭಗಳಲ್ಲಿ ನನ್ನ ಸಮಾಧಾನಕ್ಕಾಗಿ ಒಂದು ಮೇಲ್ ಬಂದು ಬಿಡುತ್ತೆ. ಅಷ್ಟಾದರೂ ಸಾಕು. ಒಬ್ಬರಿಗೆ ಪ್ರಯೋಜನ ವಾದರೂ ನನ್ನ ಕೆಲಸ ನಾನು ಮಾಡುವೆ. ನನ್ನ ಮೇಲ್ ಗೆ ಸ್ಪಂಧಿಸಿದ ಶ್ರೀ ಸುನಿಲ್ ಕೇಳ್ಕರ್ ಅವರ ರಿಪ್ಲೆ ನಮ್ಮ ಓದುಗರ ಗಮನಕ್ಕಾಗಿ ಇಲ್ಲಿ ಪ್ರಕಟಿಸಿರುವೆ.
Sunil Kelkar
13:18 (45 minutes ago)

to me
Respected Sir,

Pls. do not stop sending vedapatha.

Since I have mapped my personal mail box [snkelkar1@gmail.com] with my office mail id , a copy of everything coming to my gmail is forwarded as a copy to my official mail id. There attachments like mp3,mp4,bmp,etc are removed.

I do get info from gmail account. Hence pls do not stop sending info.

Thanks & Regards,

Sunil Kelkar

Monday, 10 December 2012

ಗಣೇಶ ಸೂಕ್ತ ಮಂತ್ರಗಳ ಸ್ವರ ಪಾಠ



ಅಂತರ್ಜಾಲದ ಮೂಲಕ ವೇದ ಕಲಿಯಲು ಅನುಕೂಲ ವಾಗುವಂತೆ     ವೇದಸುಧೆ ವೆಬ್ ಸೈಟ್ ನಲ್ಲಿ      ವೇದ ಪಾಠದ ಆಡಿಯೋ ಅಳವಡಿಸಲಾಗುತ್ತಿದೆ.  ಪ್ರತ್ಯಕ್ಷ ತರಗತಿಯಲ್ಲಿ ಗುರುಗಳು ನಮಗೆ ಕಲಿಸಿದ್ದನ್ನು  ಕಲಿಯಲು ಅನುಕೂಲವಾಗುವಂತೆ ಎಡಿಟ್ ಮಾಡಿ ಅಳವಡಿಸಲಾಗುತ್ತಿದೆ. ಈ ಹಿಂದಿನ ಆಡಿಯೋ    ಹಾಕಿದಾಗ ಅದರಿಂದ ಕಲಿಯಲು ತೊಡಕಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಅದನ್ನು ಕೇಳಿದವರಾರೂ ಹೇಳಲಿಲ್ಲ. ನಾವು ವೇದವನ್ನು ಕಲಿಯುವಾಗ ಆಗುವ ತೊಂದರೆ ತಿಳಿಸಿದರೆ ಅದನ್ನು ಸರಿಪಡಿಸಲು ಅನುಕೂಲವಾಗುತ್ತದೆ. ಹಿಂದಿನ ಆಡಿಯೋ ದಿಂದ ಹೆಚ್ಚು ಅನುಕೂಲವಾಗಿಲ್ಲವೆಂದು    ನನ್ನ ಅನಿಸಿಕೆ ಅದಕ್ಕಾಗಿ ಇಲ್ಲಿ ಮತ್ತೊಂದು ಆಡಿಯೋ ಅಳವಡಿಸಲಾಗಿದೆ   .

ಗಣೇಶ ಸೂಕ್ತದಲ್ಲಿ ಎಲ್ಲೆಲ್ಲಿ ಸ್ವರಗಳಿಗೆ ಒತ್ತು ಕೊಟ್ಟು ಕಲಿಯಬೇಕೋ ಅಲ್ಲೆಲ್ಲಾ ನಮ್ಮ ಗುರುಗಳು ಬಹಳ ಗಮನ ವಿಟ್ಟು ಹೇಳಿಕೊಟ್ಟಿದ್ದಾರೆ. ನಾವು ಅನುಸರಿಸಲು ಅನುಕೂಲವಾಗುವಂತೆ ಅವರು ಹೇಳಿಕೊಟ್ಟಿದ್ದನ್ನು ಅವರ ಕಂಠದಿಂದಲೇ ಮತ್ತೊಮ್ಮೆ ಹಾಕಲಾಗಿದೆ. ಎರಡ ನೆಯ ಭಾರಿ ಗುರುಗಳು ಹೇಳುವಾಗ ಅವರಜೊತೆಗೆ ನಾವು ಹೇಳಿದರೆ ಸ್ವರವನ್ನು  ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತದೆ. 
ಗುರುಗಳ ಎದಿರು ಕುಳಿತು ವೇದಮಂತ್ರವನ್ನು ಕಲಿಯುವುದಕ್ಕೂ  ಅಂತರ್ಜಾಲದಲ್ಲಿ ಕಲಿಯುವುದಕ್ಕೂ ಬಹಳ ವೆತ್ಯಾಸವಿದೆ. ಆದರೂ ಪ್ರತ್ಯಕ್ಷ ಅನುಭವಕ್ಕೆ ಹತ್ತಿರವಾಗಿರುವಂತೆ  ಆಡಿಯೋ ತಯಾರಿಸಲಾಗಿದೆ. ಇದರ ಸಾದಕಬಾದಕಗಳನ್ನು ದಯಮಾಡಿ ತಿಳಿಸಿ, ಅದರಿಂದ ಸರಿಪಡಿಕೊಂಡು ಇನ್ನೂ ಉತ್ತಮವಾಗಿ ಆಡಿಯೋ ಹಾಕಲು ಅನುಕೂಲವಾಗುತ್ತದೆ.

ಮಂತ್ರವನ್ನೇನೋ ಕಲಿಯುವುದು ಅಷ್ಟು ಕಷ್ಟವಾಗಲಾರದು. ಆದರೂ ಸ್ವರಸಹಿತ ಕಲಿಯುವಾಗ ಬಹಳ ಪ್ರಯತ್ನವನ್ನಂತೂ ಹಾಕಲೇ ಬೇಕಾಗುತ್ತದೆ. ಅದರಿಂದ ಪಾಠವು ನಿಧಾನವಾದಂತೆ ಭಾಸವಾಗುತ್ತದೆ. ಆದರೆ ಒಮ್ಮೆ ಸ್ವರವನ್ನು ಸರಿಯಾಗಿ ಕಲಿತರೆ ಮುಂದೆ ನಮ್ಮ ವೇದ ಪಾಠವು ವೇಗ ಪಡೆದುಕೊಳ್ಳ ಬಹುದು.

Sunday, 9 December 2012

ಚನ್ನರಾಯಪಟ್ಟಣದಲ್ಲಿ ನಡೆದ ವಿಶೇಷ ವೇದಾಭ್ಯಾಸ

ದಿನಾಂಕ 9.11.2012 ಭಾನುವಾರ ಗುರುಗಳಾದ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರ ಮಾರ್ಗದರ್ಶನದಲ್ಲಿ ಹಾಸನದ ಮತ್ತು ಚನ್ನರಾಯಪಟ್ಟಣದ ವಿದ್ಯಾರ್ಥಿಗಳಿಗೆ ವಿಶೇಷ ವೇದಾಭ್ಯಾಸವು ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀ ಪ್ರಸಾದ್ ಅವರ ಮನೆಯಲ್ಲಿ ನಡೆಯಿತು. ಅಂದಿನ ಒಂದು ವೀಡಿಯೋ ಇಲ್ಲಿದೆ.

Sunday, 18 November 2012

ದಿನಾಂಕ 18.11.2012 ರಂದು ನಡೆದ ವೇದಪಾಠ








ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:

ಈಶಾವಾಸ್ಯಮ್
ಶಕ್ತಿ ಗಣಪತಿ ದೇವಾಲಯ ರಸ್ತೆ
ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ
ಸಂಪರ್ಕ ದೂರವಾಣಿ: 08172-250566/9663572406

Sunday, 4 November 2012

ಶ್ರೀ ಸುಧಾಕರಶರ್ಮರೊಡನೆ ಮುಕ್ತ ಸಂಭಾಷಣೆ

ಈಗ್ಗೆ ಮೂರ್ನಾಲ್ಕು ವರ್ಷಗಳಲ್ಲಿ ವೇದಾಧ್ಯಾಯೀ   ಶ್ರೀ ಸುಧಾಕರಶರ್ಮರೊಡನೆ ನಡೆಸಿದ ಮುಕ್ತ ಸಂಭಾಷಣೆ ಯು ನಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿದೆ.
ಸಂಭಾಷಣೆಯಲ್ಲಿ ಸುಧಾಕರಶರ್ಮರೊಡನೆ ವೇದಸುಧೆಯ ಸಂಪಾದಕರುಗಳಾದ
ಶ್ರೀ ಹರಿಹರಪುರಶ್ರೀಧರ್  ಶ್ರೀ ನಾಗರಾಜ್ ಮತ್ತು ಡಾ. ವಿವೇಕ್ ಪಾಲ್ಗೊಂಡಿದ್ದಾರೆ.

Thursday, 1 November 2012

ಕಲ್ಯಾಣಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ…..


ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ  ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ!  ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ  ಕಲಿಯುತ್ತಿರುವ ವಿದ್ಯಾರ್ಥಿಯು  ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.

ಇಂದಿನ ವೇದ ಮಂತ್ರದ ಬಗ್ಗೆ ಸ್ವಲ್ಪ ವಿಮರ್ಶೆ ಮಾಡೋಣ.
ಋಗ್ವೇದ ಮಂಡಲ: 5    ಸೂಕ್ತ: 55    ಮಂತ್ರ: 8

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||

ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ  = ಯಾವುದು ಪ್ರಾಚೀನವೋ    ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು 
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ  ಯಾತಾಂ  ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ:  ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ

ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ…

ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದಿನ ದಿನಗಳಲ್ಲಿ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

Wednesday, 31 October 2012

ವಿಶೇಷ ಮಂತ್ರಾಭ್ಯಾಸ


ಆತ್ಮೀಯ ವೇದಾಭಿಮಾನಿಗಳಲ್ಲಿ ನಮಸ್ಕಾರಗಳು.

             ಕಳೆದ ಆಗಸ್ಟ್ 19 ರಂದು ಆರಂಭವಾದ "ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠವು"  ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತ್ಯಕ್ಷವಾಗಿ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರೆ, ವೆಬ್ ಸೈಟ್ ಮೂಲಕ ಹಲವರು ಮತ್ತು ಸುಮಾರು 40 ವಿದ್ಯಾರ್ಥಿಗಳು ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಮತ್ತು ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀ ಪ್ರಸಾದ್ ಅವರು ಪಾಠವನ್ನು ಮಾಡುತ್ತಿದ್ದಾರೆ. ಇದುವರೆವಿಗೆ ...
1. ವಿಶ್ವಾನಿ ದೇವ  [ ಯಜು.30.3 ] ಪಾಠ ಆಗಿದೆ
2. ಪ್ರಣೋದೇವೀ....[ಋಗ್...ಸರಸ್ವತೀ ಸೂಕ್ತದ ಆಯ್ದ ಭಾಗ] ಪಾಠ ಆಗಿದೆ
3. ಶ್ರೀ ಗಣೇಶ ಸೂಕ್ತಮ್ [ಋಗ್.  ಮಂಡಲ-8 ಅಷ್ಟಕ-6  ಸೂಕ್ತ-81] .......ಈಗ ನಡೆಯುತ್ತಿದೆ.

ವೇದ ಪಾಠವನ್ನು ಸರಿಯಾಗಿ ಕಲಿಯಲು ವಾರಕ್ಕೊಂದು ಗಂಟೆ ಏನೇನೂ ಸಾಲದು. ಆದರೆ ವೇದಮಂತ್ರಗಳ ಜೊತೆಗೇ  ವೇದದಲ್ಲಿರುವ ಅನೇಕ ಮಂತ್ರಗಳ ಬಗ್ಗೆ ಆಗಿಂದಾಗ್ಗೆ  ಉಪನ್ಯಾಸಗಳನ್ನು ಯೋಜಿಸುವುದರಿಂದ  ಸ್ವಲ್ಪ ಮಟ್ಟಿಗಾದರೂ ವೇದದ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ. 
ಇದುವರಗೆ ಕಲಿತಿರುವ ಮಂತ್ರಗಳನ್ನು  ಉಚ್ಚರಿಸುವಾಗ ಆಗುವ ಸ್ವರದಲ್ಲಿನ ದೋಷಗಳನ್ನು ತಿದ್ದಿ  ಸಾಮೂಹಿಕವಾಗಿ ಅಭ್ಯಾಸ ಮಾಡಲು  ನಾವೆಲ್ಲಾ ವೇದ ವಿದ್ಯಾರ್ಥಿಗಳು ಒಂದು ಭಾನುವಾರ 5-6 ಗಂಟೆಗಳ ಕಾಲ ಒಟ್ಟಿಗೆ  ಸೇರಬೇಕೆಂಬ  ಸಲಹೆಯು     ಹಲವರಿಂದ  ಬಂದಿದೆ. ದಿನಾಂಕ 11.11.2012 ಭಾನುವಾರ    ಅಥವಾ ಎಲ್ಲರಿಗೂ ಅನುಕೂಲ ವಾಗುವ ಒಂದು ದಿನ  ಹಾಸನದ ಈಶಾವಾಸ್ಯಮ್ ನಲ್ಲಿ  ಅಥವಾ  ರಾಮನಾಥಪುರ ದಂತಹ ನದೀ ತೀರದಲ್ಲಿ  5-6 ಗಂಟೆಗಳ ಕಾಲ ಒಟ್ಟಿಗೆ ಅಭ್ಯಾಸ ಮಾಡಿದರೆ ಮಂತ್ರ ಪಾಠವನ್ನು ಮುಂದುವರೆಸಿಕೊಂಡು ಹೋಗಲು ಸುಲಭವಾಗುತ್ತದೆ,. ಎಂಬ ಅಭಿಪ್ರಾಯವಿದೆ. ನವಂಬರ್ ನಲ್ಲಾದರೆ ದಿನಾಂಕ  11 ಅಥವಾ 18 , ಡಿಸೆಂಬರ್ ನಲ್ಲಿ ಯಾವುದೇ ಭಾನುವಾರವೂ ಆಗಬಹುದು. ನಿಮ್ಮ  ಸಲಹೆಯನ್ನು vedasudhe@gmail.com ಗೆ  ಮೇಲ್ ಮಾಡಿ. ಹೆಚ್ಚು ಜನರಿಗೆ ಅನುಕೂಲ ವಾಗುವ ಸ್ಥಳ /ದಿನವನ್ನು ಅಂತಿಮವಾಗಿ ನಿರ್ಧರಿಸೋಣ.ಈ ಮೇಲ್ ನಲ್ಲಿ  ಪಾಠವನ್ನು ತರಿಸಿಕೊಳ್ಳುತ್ತಿರುವವರು ಹೀಗಾದರೂ ವರ್ಷಕ್ಕೊಮ್ಮೆ ಅಥವಾ ಎರಡು ಭಾರಿ ಪ್ರತ್ಯಕ್ಷ ಪಾಠದಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೇ? 
ಈ ಮೇಲ್ ನಲ್ಲಿ ಯಾರಿಗೆ ಪಾಠ ತಲುಪಿಲ್ಲ ಅವರು  ಮೇಲ್ ಮಾಡಿದರೆ ಪಾಠವನ್ನು ಕಳಿಸಿಕೊಡಲಾಗುತ್ತದೆ. ಪಾಠ ತರಿಸಿಕೊಂಡವರು ಕಲಿಯಿಯುತ್ತಿದ್ದೀರಿ, ತಾನೇ?
ಗಣೇಶ ಸೂಕ್ತಮ್ ಮಂತ್ರ ಪಾಠ ಮುಗಿದ ಮೇಲೆ ಶ್ರೀ ವಿಶ್ವನಾಥ ಶರ್ಮರು ಅರ್ಥವನ್ನು ತಿಳಿಸುವರು.
ನಮಸ್ಕಾರಗಳೊದನೆ
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ/ವೇದ ಭಾರತೀ
ಮನವಿ:   ಶ್ರೀ ವಿಶ್ವನಾಥ ಕಿಣಿಯವರು  ಡಿಸೆಂಬರ್: 23 ಸೂಕ್ತವೆಂದುತಿಳಿಸಿದ್ದಾರೆ ಉಳಿದವರ  ಅಭಿಪ್ರಾಯವನ್ನು    ತಿಳಿಸಿ vedasudhe@gmail.com ಗೆ ಮೇಲ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9663572406 ಗೆ ಕರೆಮಾಡಬಹುದು


----------------------------------------------------------------------------

Dear Sir:

I am visiting Bangalore from Canada and have been greatly impressed by what you are doing to promote the vedic traditon. I have been trying to reach/contact sri Sudhakara Sharma and even called Sri Shankara TV to get his contact number in Bangalore. Could you please help me to contact him before I leave for Canada on Nov 16.

Your help will be greatly appreciated
With best wishes
Dr. G. Lakshman

ಕೆನಡಾದಲ್ಲಿರುವ ಡಾ.ಲಕ್ಷ್ಮಣ್ ರವರು ಈಗ   ಬೆಂಗಳೂರಿಗೆ ಬಂದಿದ್ದು ಅವರ ದೂರವಾಣಿ ಮೂಲಕ ಮಾತನಾಡಿ ವೇದಸುಧೆ/ವೇದಭಾರತಿಯ ಕಾರ್ಯವನ್ನು ಮುಕ್ತಕಂಠದಿಂದ ಮೆಚ್ಚಿದರು. ನಮ್ಮ ಶ್ರಮ ಸಾರ್ಥಕವಲ್ಲವೇ? ಹೊರದೇಶದಲ್ಲಿರುವ ಕನ್ನಡಿಗರಿಗಾಗಿ ಹೊರದೇಶದಲ್ಲಿರುವವರ ಸಹಕಾರದೊಡನೆ ಆನ್ ಲೈನ್ ವೇದ ಮಾಠವನ್ನು ಮಾಡುವ ಯೋಜನೆ ವೇದಭಾರತಿಗೆ ಇದೆ. ಇಂದು ಮನದಲ್ಲಿ ಮೂಡಿದ್ದು ನಾಳೆ ಕಾರ್ಯಗತವಾಗುವುದರಲ್ಲಿ ಸಂಶಯವಿಲ್ಲ. ಇದು ನನ್ನ ಅನುಭವ.

-ಹರಿಹರಪುರಶ್ರೀಧರ್
ಸಂಪಾದಕ
ವೇದಭಾರತೀ/ ವೇದಸುಧೆ

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ




ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. ವೇದಸುಧೆಯು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ/ಬೇದಭಾರತೀ



Tuesday, 30 October 2012

ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮ

ಶ್ರೀ ಎಸ್.ಎಲ್.ಎನ್. ಸ್ವಾಮಿಯವರು ವೇದಾಧ್ಯಾಯೀ ಸುಧಾಕರ ಶರ್ಮರೊಡನೆ ನಡೆಸಿದ ಸಂದರ್ಶನವು ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ   ಕೆಲವು ತಿಂಗಳ ಹಿಂದೆ ಪ್ರಕಟವಾಗಿತ್ತು.  ಒಂದು ಗಂಟೆಗಳ ಕಾಲ ಪ್ರದರ್ಶನವಾಯ್ತು. ವೇದದ ವಿಚಾರದಲ್ಲಿ ಜಿಜ್ಞಾಸುಗಳಿಗೆ ಇರಬಹುದಾದ ಹಲವಾರು ಅನುಮಾನಗಳನ್ನು ಬಿಡಿಬಿಡಿಯಾಗಿ ಬಹಳ ಸ್ಪಷ್ಟ ನುಡಿಗಳಲ್ಲಿ ವಿವರಿಸುತ್ತಾ ಶ್ರೀ ಶರ್ಮರ ಸಂದರ್ಶನವು ಸಾಗಿತ್ತು. ವೇದಸುಧೆಯಲ್ಲಿ ಕೆಲವು ಗಂಟೆಗಳ ಮುಂಚೆ ಈ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗಿತ್ತು. ಅದರ ಮೂಲಕ ಸುದ್ಧಿ ತಿಳಿದ ಅನೇಕರು ಕಾರ್ಯಕ್ರಮದ ಪ್ರಸಾರಸಮಯದಲ್ಲಿಯೇ ತಮ್ಮ ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸುದ್ಧಿ ತಲುಪಿಸಿ ಈ ಕಾರ್ಯಕ್ರಮವನ್ನು ನೋಡಲು ಕಾರಣರಾದರು. ಈ ಸಂದರ್ಶನದ ಆಡಿಯೋ ವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾವಕಾಶವಾಗಿ ಕೇಳಿ ನಿಮ್ಮ ಅನಿಸಿಕೆಗಳನ್ನು ವೇದಭಾರತಿಗೆ ಬರೆಯುವುದನ್ನು ಮರೆಯದಿರಿ.ಕೃಪೆ: ಶ್ರೀ ಶಂಕರ ಟಿ.ವಿ. ಚಾನಲ್



Monday, 29 October 2012

ವೇದ ಪಾಠ-8












ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವವರಿಗೆಲ್ಲರಿಗೂ ಇಂದು  ಮೇಲ್ ಮಾಡಲಾಗಿದೆ. ತಲುಪದಿದ್ದವರು  ತಿಳಿಸಿದರೆ ಕೂಡಲೇ ಮೇಲ್ ಮಾಡುವೆ.
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

  

Tuesday, 2 October 2012

ಮಾಧ್ಯಮ-ಸಂವಾದ

ಹಾಸನ ಜನತೆಗೆ  ವೇದಾಧ್ಯಾಯೀ  ಶ್ರೀ ಸುಧಾಕರಶರ್ಮರ ಪರಿಚಯವಾಗಿ ನಾಲ್ಕೈದು ವರ್ಷವಾಯ್ತು. ಹಾಸನದ ಶ್ರೀ ಶಂಕರ ಮಠದಲ್ಲಿ ಅವರ ನಾಲ್ಕಾರು ಉಪನ್ಯಾಸಗಳು ನಡೆದಿದ್ದು   ಈಗ್ಗೆ ಎರಡು ವರ್ಷಗಳ ಹಿಂದೆ     "ವೇದಸುಧೆ"ಯ ವಾರ್ಷಿಕೋತ್ಸವದಲ್ಲಿ ಅವರ ಉಪನ್ಯಾಸಗಳ ಸಿಡಿ. "ನಿಜವ ತಿಳಿಯೋಣ" ಬಿಡುಗಡೆಯಾಗಿತ್ತು. ಆ ನಂತರ ಶ್ರೀಯುತರ ಅನಾರೋಗ್ಯದಿಂದಾಗಿ ಹಾಸನಕ್ಕೆ ಅವರನ್ನು ಮತ್ತೆ ಕರೆಸಲಾಗಿರಲಿಲ್ಲ.ಹಾಸನದ ಜನತೆಗೆ ಶ್ರೀಯುತರ ಮಾತು ಕೇಳುವ ಕಾತುರತೆ ಇತ್ತು. ಅದಕ್ಕೆ ಅವಕಾಶವೂ ಒದಗಿಬಂತು. ಪ್ರವಾಸ ಮಾಡುವಷ್ಟು ಅವರ ಆರೋಗ್ಯ ಸುಧಾರಿಸದಿದ್ದರೂ ಹಾಸನದ ಜನತೆಯ ಮೇಲಿನ ಪ್ರೀತಿ ಮತ್ತು ವೇದ ಪ್ರಚಾರ ಮಾಡುವ ಅವರ ದೃಢ ನಿಲುವು ಅವರನ್ನು ಹಾಸನಕ್ಕೆ ಬರುವಂತೆ ಮಾಡಿತು. ದಿನಾಂಕ 29.09.2012 ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶ್ರೀಯುತರೊಡನೆ ಮಾಧ್ಯಮ-ಸಂವಾದ ನಡೆಯಿತು. ಮುಕ್ತವಾತಾವರಣದಲ್ಲಿ ಅತ್ಯಂತ ಸಂಬ್ರಮದಿಂದ  ನಡೆದ  ಸಂವಾದದ ಆಡಿಯೋ ಇಲ್ಲಿದೆ. ವಿಚಾರ ಮಾಡುವಂತಹ ಎಲ್ಲರೂ ಅತ್ಯಗತ್ಯವಾಗಿ ಕೇಳಲೇ  ಬೇಕಾದ ಮಾತುಗಳು. ಎಲ್ಲವೂ  2-3 ನಿಮಿಷಗಳ ಆಡಿಯೋ ಕ್ಲಿಪ್ ಗಳು. ಕೇಳಿ ,ನಿಮ್ಮ ಅಭಿಪ್ರಾಯ ತಿಳಿಸಿ.



ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರಾಸ್ತಾವಿಕ ನುಡಿ:

 ಪ್ರಶ್ನೆ-1 ಅಪಾತ್ರರಿಗೆ ವೇದವನ್ನು ಕಲಿಸಬಾರದು, ಅಂತಾರಲ್ಲಾ?

  ಪ್ರಶ್ನೆ-2 ವೇದಾಧ್ಯನ ಮಾಡಲು ಆಹಾರ ಮತ್ತು ವಸ್ತ್ರ ಸಂಹಿತೆ ಇದೆಯೇ?

ಪ್ರಶ್ನೆ-3 ವೇದ ಎಂದರೆ ಏನು?
 

ಪ್ರಶ್ನೆ-4 ಸ್ಮೃತಿಗಳ ಬಗ್ಗೆ ಏನು ಹೇಳುವಿರಿ?

ಪ್ರಶ್ನೆ-5 ನಮ್ಮ ಸಂಪ್ರದಾಯಗಳು ನಮ್ಮ ಸಮಾಜದಲ್ಲಿ ಸಮಸ್ಯೆಗಳಿಗೆ ಕಾರಣವಾಗಿವೆಯೇ?


ಪ್ರಶ್ನೆ-6 ವೇದಾಭ್ಯಾಸವನ್ನು ಮಾಡಲು
ಉಪನಯನ ಸಂಸ್ಕಾರ ಆಗಿರಲೇ ಬೇಕೇ?



ಪ್ರಶ್ನೆ-7 ವೇದಗಳನ್ನು ಪರಮಪ್ರಮಾಣ ಎಂದು ಹೇಗೆ ಹೇಳುವಿರಿ?

ಪ್ರಶ್ನೆ-8 ಜಾತಿ ಪದ್ದತಿ ಹೇಗೆ ಬೆಳೆದು ಬಂತು?

 ಪ್ರಶ್ನೆ-9 ವೇದದ ದೃಷ್ಟಿಯಲ್ಲಿ ಶಿಕ್ಷಣ ಅಂದರೆ.....?