ಎಲ್ಲರಿಗಾಗಿ
ವೇದ
ದಿನಾಂಕ:
23.12.2012
ವೇದದ ಹಿರಿಮೆ ಬಗ್ಗೆ ಒಂದು ಮಂತ್ರವನ್ನು ಇಂದು ನೋಡೋಣ.
[ಅಥರ್ವ: 8-2-25]
ಸರ್ವೋ ವೈ ತತ್ರ ಜೀವತಿ ಗೌರವಶ್ವ: ಪುರುಷ: ಪಶು: |
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ ||
ಪದಾರ್ಥ:
ಯತ್ರ = ಎಲ್ಲಿ
ಇದಂ ಬ್ರಹ್ಮ= ಈ ವೇದ ಜ್ಞಾನವು
ಕಮ್ = ಅನುಕೂಲವಾದ ರೀತಿಯಲ್ಲಿ
ಜೀವನಾಯ ಪರಿಧಿ: ಕ್ರಿಯತೇ = ಜೀವನವನ್ನು ಸುತ್ತುಗಟ್ಟುತ್ತದೋ
ತತ್ರ = ಅಲ್ಲಿ
ಗೌ: = ಗೋವು
ಅಶ್ವ: = ಕುದುರೆ
ಪುರುಷ: =ಮಾನವ
ಪಶು: = ಪ್ರಾಣಿಗಳು
ಸರ್ವ = ಎಲ್ಲರೂ
ವೈ = ನಿಜವಾಗಿ
ಜೀವತಿ = ಜೀವಿಸುತ್ತವೆ
ಭಾವಾರ್ಥ:
ಎಲ್ಲಿ ವೇದವು ನಮ್ಮ ಜೀವನದ ಜೊತೆಯಲ್ಲಿ ಆವರಿಸಿರುವುದೋ ಅಲ್ಲಿ ಮನುಷ್ಯ
ಮಾತ್ರವಲ್ಲದೇ ಗೋವುಗಳು, ಕುದುರೆ ಹಾಗೂ ಎಲ್ಲಾ ಜೀವಿಗಳೂ ಕೂಡ ನಿಜವಾಗಿ ಜೀವಿಸುತ್ತವೆ.
ಅಂದರೆ ಈ ಮಂತ್ರವು ಏನು ಹೇಳುತ್ತದೆ?
ವೇದ ಜ್ಞಾನವು ಎಲ್ಲಿ
ಇರುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಜೀವಿಸುತ್ತವೆಂದರೆ ಮನುಷ್ಯನ ಜೊತೆಗೆ, ಪ್ರಾಣಿ ಪಕ್ಷಿಗಳೂ ಅಷ್ಟೇ ಅಲ್ಲ ಅಲ್ಲಿರುವ
ಗಿಡಮರ ಬಳ್ಳಿಗಳೂ ಕೂಡ ನಿಜವಾಗಿ ಅಂದರೆ ಯಾವ ನೋವಿಲ್ಲದೆ
ಬಾಳುತ್ತವೆ. ಅದು ಹೇಗೆ ಸಾಧ್ಯ? ಎಂಬ ಬಗ್ಗೆ ಸ್ವಲ್ಪ ಚಿಂತನ-ಮಂಥನ ನಡೆಸಿದರೆ ನಮಗೆ ಅರಿವಾಗುವುದೇನೆಂದರೆ
ವೇದದ ಅರಿವಿರುವ ಕಡೆ ಮನುಷ್ಯನು ಪ್ರಕೃತಿ ಸಂಪತ್ತನ್ನು
ಲೂಟಿ ಮಾಡುವುದಿಲ್ಲ, ಎಲ್ಲರಲ್ಲೂ ಮೈತ್ರಿಭಾವ ಹೊಂದಿರುತ್ತಾನಾದ್ದರಿಂದ ಎಲ್ಲರೂ ತನ್ನಂತೆ ಎಂಬ ಭಾವನಾತ್ಮಕ ಸಂಬಂಧವು ಅಲ್ಲಿರುತ್ತದೆ. ಆದ್ದರಿಂದ ಅಲ್ಲಿ ಯಾರೂ ಹಸಿವಿನಿಂದ ಇರಬೇಕಾಗಿಲ್ಲ. ಕೆಳಗೆ ಬಿದ್ದವರನ್ನು
ಮೇಲೆತ್ತುತ್ತಾ, ತಾನು ಅದಕ್ಕಿಂತ ಮೇಲೇರುತ್ತಾ ಪುನ: ತನಗಿಂತ ಹಿಂದುಳಿದವರನ್ನು ಮತ್ತೊಮ್ಮೆ ಕೈ ಹಿಡಿದು
ಮೇಲೆತ್ತುತ್ತಾ ಹೀಗೆ ಜೊತೆಯಲ್ಲಿ ಕರೆದುಕೊಂಡು ಹೋಗುವ ಈ ವಿಚಾರದ ಬಗ್ಗೆ ಸ್ವಲ್ಪ ಚಿಂತನೆ ಮಾಡಿದರೆ ನಮಗೆ ಹೀಗೆನಿಸಬಹುದು………
ಕೆಳಗೆ ಬಿದ್ದವರನ್ನು ಕೈಹಿಡಿದು ಮೇಲೆತ್ತಿ ತನ್ನಮಟ್ಟಕ್ಕೆ ಏರಿಸಿಕೊಂಡಾಗ ಅದು all are equal ಎಂಬ ಸಮಾಜವಾದ ಆಗದೆ ಇರದು.ಸಮಾಜವಾದವು
ಈ ಸ್ಥರದಲ್ಲಿ ನಿಂತು ಬಿಡುತ್ತದೆ. ಎಲ್ಲರೂ ಸಮನಾದ ಮೆಲೆ ಮುಂದೇನು? ಎಂದರೆ ಸಮಾಜವಾದದಲ್ಲಿ ಉತ್ತರವಿಲ್ಲ.
ಆದರೆ ವೇದವು ಪುನ: ಕರೆಕೊಡುತ್ತದೆ” ನೀನು ನಿನ್ನ ಸಾಮರ್ಥ್ಯಬಳಸಿಕೊಂಡು ಜೊತೆಯಲ್ಲಿದ್ದವರಿಗಿಂತಲೂ
ಮೇಲೇರು” ಹೀಗೆಂದಾಗ ನೀನು ಶ್ರೀಮಂತನಾಗು, ವಿದ್ವಾಂಸನಾಗು,
ಎಂದು ಕರೆಕೊಡುವ ವೇದವು ಅಲ್ಲಿಗೂ ನಿಲ್ಲುವುದಿಲ್ಲ. ನೀನು ಮೇಲೇರಿದಾಗ ಇನ್ನು ಕೆಲವರು ಹಿಂದೆ ಉಳಿದರಲ್ಲವೇ?
ಈಗ ಅವರ ಕೈ ಹಿಡಿದು ಮೇಲೆತ್ತು ,ಎಲ್ಲಿಯವರಗೆ…ಎಂದರೆ ಅದು ಕಾಟಾಚಾರದ ಮಾತಲ್ಲ. ನಿಜವಾಗಿ ಹಿಂದುಳಿದಿದ್ದವನು ನಿನ್ನ ಎತ್ತರಕ್ಕೆ ಬರುವ ವರೆಗೂ
ಅವನನ್ನು ಮೇಲೆತ್ತುವ ಹೊಣೆ ನಿನ್ನದು”- ಎಂದು ವೇದವು ಎಚ್ಚರಿಸುತ್ತದೆ. ಪುನ: ಅಷ್ಟಕ್ಕೆ ಸುಮ್ಮನಾಗುವಂತಿಲ್ಲ.
ಪುನ: ನಿನ್ನ ಸಾಮರ್ಥ್ಯ ಉಪಯೋಗಿಸಿಕೊಂಡು ಮೇಲೇರು ನಂತರ ಹಿಂದೆ ಬಿದ್ದವರನ್ನು ನಿನ್ನ ಎತ್ತರಕ್ಕೆ
ಪ್ರೀತಿಯಿಂದ ಕೈ ಹಿಡಿದು ಎತ್ತು”
ಹೀಗೆ ಈ ಪ್ರಕ್ರಿಯೆಗಳು ನಿರಂತರ.
ನಾವು ಸಂಪತ್ತು ಗಳಿಸಿದೆವೆಂದು ಸುಮ್ಮನಿರುವಂತಿಲ್ಲ. ವಿದ್ವಾಂಸನಾಗಿಬಿಟ್ಟೆ ನೆಂದು ಮೈಮರೆಯುವಂತಿಲ್ಲ.
ತಾನು ಬೆಳೆಯುತ್ತಾ, ಜೊತೆಯಲ್ಲಿರುವವರನ್ನೂ ಬೆಳೆಸುತ್ತಾ ಯಾವಾಗಲೂ ಕ್ರಿಯಾಶೀಲನಾಗಿರಬೇಕೆಂದು ಕರೆ
ಕೊಡುವ ವೇದಕ್ಕೆ ಸರಿಸಾಟಿ ಉಂಟೆ?