ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday, 22 May 2013

ಕುಸುಮ-6


                “ಎಲ್ಲರಿಗಾಗಿ ವೇದ”             9.12.2012          
                                             

ಇನ್ನೊಂದು ಮಂತ್ರವನ್ನು ನೋಡೋಣ.
[ಅಥರ್ವ: 2-11-5]
ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
ಅರ್ಥ:
ಶುಕ್ರ: ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜ: ಅಸಿ = ಪ್ರಕಾಶವಾಗಿದ್ದೀಯೆ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ
            ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು.
  “ ಶ್ರದ್ಧೆ”
ಅಂಧಪರಂಪರೆಗೆ ವೇದವು ವಿರೋಧಿಯಾಗಿದ್ದು ಅರಿತು ಮಾಡುವ ಆಚರಣೆಗಳ ಬಗ್ಗೆ “ ಶ್ರದ್ಧೆ” ಹೇಗಿರಬೇಕೆಂಬುದನ್ನು ಈ ಕೆಳಗಿನ ವೇದಮಂತ್ರವು ಸಾರುತ್ತದೆ….
ಋಗ್ವೇದ: 10-151-5
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯ ದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನ:  ||

ಪ್ರಾತ:= ಬೆಳಗಿನಹೊತ್ತು
ಶ್ರದ್ಧಾಂ ಹವಾಮಹೇ= ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಮಧ್ಯಂದಿನಂ ಪರಿ= ನಡುಹಗಲಿನಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಸೂರ್ಯಸ್ಯ ನಿಮೃಚಿ= ಸೂರ್ಯಾಸ್ತ ಕಾಲದಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇವೆ
ಶ್ರದ್ಧೇ= ಓ ಶ್ರದ್ಧೇ!
ಇಹ= ಈ ಜಗತ್ತಿನಲ್ಲಿ
ನ: ಶ್ರದ್ಧಾಪಯ=ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು

ಅಂದರೆ ಬೆಳಿಗ್ಗೆ ಏಳುವಾಗಲಿಂದ ರಾತ್ರಿ ಮಲಗುವ ತನಕ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಈ ಮಂತ್ರವು ಹೇಳುತ್ತದೆ. ಅಂದರೆ ಶ್ರದ್ಧೆ ಎಂದರೇನು?  ನಮ್ಮ ನಂಬಿಕೆಯು ಯಾವಾಗ ಶ್ರದ್ಧೆ ಎನಿಸಿಕೊಳ್ಳುತ್ತದೆ? “ ಶ್ರದ್ದಾ” ಎಂಬ ಪದವನ್ನು ಬಿಡಿಸಿಕೊಂಡಾಗ  “ಶ್ರದ್ಧೆ” ಪದದ ಸರಿಯಾದ ಅರ್ಥ ಗೊತ್ತಾಗುತ್ತದೆ.
ಸಾಮಾನ್ಯವಾಗಿ ಆಡುಮಾತಿನಲ್ಲಿ ಹೇಳುವುದುಂಟು” ನಮ್ಮ ಮಕ್ಕಳಿಗೆ  ನಮ್ಮ ಧರ್ಮದಲ್ಲಿ ಶ್ರದ್ಧೆ ಇಲ್ಲ, ನಮ್ಮ ಆಚಾರ-ವಿಚಾರಗಳಲ್ಲಿ ಶ್ರದ್ಧೆ ಇಲ್ಲ….ಇತ್ಯಾದಿ…ಇತ್ಯಾದಿ…. ಈ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯವಾಗಿ ಭಾವಿಸುವುದೇನು? ಈಗೇನು ಆಚಾರ-ವಿಚಾರಗಳಿವೆ, ಅವುಗಳನ್ನು ಅನುಸರಿಸದಿದ್ದಾಗ….ಇವನಿಗೆ  ನಮ್ಮ ಧರ್ಮದಲ್ಲೇ ಶ್ರದ್ಧೆ ಇಲ್ಲಾ!! ಎಂದು ಅವನ ಬಗ್ಗೆ ಪೂರ್ವಾಗ್ರಹದ ತೀರ್ಪು ಹೊರಬೀಳುತ್ತದೆ!! ಆದರೆ ನಿಜವಾಗಿ ಶ್ರದ್ಧೆ ಯಾವಾಗ ಬರಬೇಕು? ಶ್ರದ್ಧೆ ಪದವೇ ಹೇಳುತ್ತದೆ…” ಸತ್ಯದ ಧಾರಣೆ” ಅಂದರೆ ನಮ್ಮ ಆಚಾರ ವಿಚಾರಗಳನ್ನು ವಿಮರ್ಶಿಸಿ” ಇದು ಸತ್ಯವೇ? ಹಿತವೇ? ಇದರಿಂದ ಸತ್ಯದ ಅಪಚಾರವಾಗುವುದಿಲ್ಲವೇ? ಎಂಬುದನ್ನು ಮನವರಿಕೆ ಮಾಡಿಕೊಂಡು ಧರಿಸುವುದಕ್ಕೆ “ ಶ್ರದ್ಧೆ” ಎನ್ನಲಡ್ಡಿಯಿಲ್ಲ. ಆದರೆ ಯಾವುದೇ ಆಚರಣೆಯ ಸತ್ಯಾಸತ್ಯತೆಯನ್ನರಿಯದೆ ಅಂಧಾನುಕರಣೆಮಾಡುವುದನ್ನು” ಶ್ರದ್ಧೆ” ಎನ್ನಲಾಗುವುದಿಲ್ಲ. ಅದು ಕೇವಲ ನಂಬಿಕೆ. ನಮ್ಮ ನಂಬಿಕೆಗಳನ್ನು ಇತರರು ಅನುಸರಿಸದಿದ್ದರೆ ಅವರಿಗೆ  ಈ ಆಚರಣೆಗಳಲ್ಲಿ” ಶ್ರದ್ಧೆ” ಇಲ್ಲಾ  ಎನ್ನುವಂತಿಲ್ಲ. ಶ್ರದ್ಧೆಯೇ ಬೇರೆ. ನಂಬಿಕೆಯೇ ಬೇರೆ. ಈ ವೇದ ಮಂತ್ರವಾದರೋ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ಮಲಗುವವರೆಗೂ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಸಾರುತ್ತದೆ. ಶ್ರದ್ಧೆಯ ಅರ್ಥವ್ಯಾಪ್ತಿ ಎಷ್ಟಿದೆ! ನೋಡಿ!

No comments:

Post a Comment