“ಎಲ್ಲರಿಗಾಗಿ
ವೇದ”
2.12.2012
ಇನ್ನೊಂದು ಮಂತ್ರವನ್ನು
ನೋಡೋಣ.
[ಅಥರ್ವ: 2-11-5]
ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
ಅರ್ಥ:
ಶುಕ್ರ: ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜ: ಅಸಿ = ಪ್ರಕಾಶವಾಗಿದ್ದೀಯೆ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ
ಈ ಮಂತ್ರದ ಹಿರಿಮೆ ನೋಡಿ,
ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ,
ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ
ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು
ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು.
ಮುಂದಿನ ಮಂತ್ರದಲ್ಲಿ ಅಂಧಾನುಕರಣೆಗೆ ವೇದವು ಅದೆಷ್ಟು ವಿರೋಧಿಯಾಗಿದೆ ಎಂಬುದನ್ನು ತಿಳಿಯಬಹುದು.
ಮಾ
ನೋ ದೀರ್ಘಾ ಅಭಿಶನ್ತಮಿಸ್ರಾ:
[ಋಗ್ವೇದ
2-27-14]
“ದೀರ್ಘವಾದ
ಅಂಧಕಾರಗಳು ನಮ್ಮನ್ನು ಆವರಿಸದಿರಲಿ”
ದೀರ್ಘವಾದ ಅಂಧಕಾರಗಳು ಯಾವುವು? ಉಧಾಹರಣೆಗೆ
ನೋಡೋಣ…
ಹೊಸದಾಗಿ
ವಾಹನವನ್ನೋ ಒಂದು ಯಂತ್ರವನ್ನೋ ಕೊಂಡು ಅದನ್ನು ಚಾಲನೆಗೊಳಿಸುವಾಗ ಪ್ರಥಮ ಪೂಜೆ ಮಾಡುತ್ತೀವಷ್ಟೆ.[ಪೂಜೆಯ
ವಿವರಣೆಯನ್ನೂ ಮುಂದೆ ನೋಡೋಣ] ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ ಹೇಗಿದೆ? ಒಮ್ಮೆ ವಿಮರ್ಷೆ ಮಾಡೋಣ. ಯಂತ್ರವನ್ನು
ಶುಚಿಗೊಳಿಸಿ ಅದಕ್ಕೆ ಒಂದಿಷ್ಟು ಅರಿಶಿನ-ಕುಂಕುಮ ಹಚ್ಚಿ ನಂತರ ಒಂದು ದೊಡ್ಡ ಬೂದಗುಂಬಳ ಕಾಯಿಗೆ ಒಂದು ಕುಳಿಮಾಡಿ ಅದರಲ್ಲಿ ಒಂದಿಷ್ಟು ಕುಂಕುಮ,ಒಂದಿಷ್ಟು ಚಿಲ್ಲರೆಕಾಸು
ತುಂಬಿ ವಾಹದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ದೊಪ್ಪೆಂದು ನೆಲದ ಮೇಲೆ ಎತ್ತಿಹಾಕಿದಾಗ
ಅದು ನಾಲ್ಕಾರು ಚೂರಾಗಿ ಅದರೊಳಗಿನಿಂದ ಕುಂಕುಮಬೆರೆತ ನೀರು ರಕ್ತದಂತೆ ಹರಿದಾಗ ಅದೇನೋ ಸಂತೋಷ!! ಪೂಜೆ
ಮಾಡಿದ ತೃಪ್ತಿ!! ಚೂರಾದ ಕುಂಬಳ ಕಾಯಿಯನ್ನು ಪ್ರಾಣಿಗಳು ತಿಂದರೂ ಅವುಗಳ ಜೀವಕ್ಕೆ
ಕಷ್ಟ. ಇನ್ನು ಮನುಷ್ಯ ತಿನ್ನುವ ಮಾತೇ ಇಲ್ಲ ಬಿಡಿ. ಬೇಯಿಸಿ ತಿನ್ನಬೇಕಾದ ಕುಂಬಳಕಾಯಿಯನ್ನು ಹೀಗೆ
ಪ್ರಯೋಜನಕ್ಕೆ ಬಾರದಂತೆ ಒಡೆದು ಎಸೆಯುವುದು ಅಂಧಕಾರದ ಪರಮಾವಧಿಯಲ್ಲವೇ?
ಯಂತ್ರವನ್ನು ಚಾಲನೆಗೊಳಿಸುವಾಗ ನಾವು
ಮಾಡಬೇಕಾದದ್ದೇನು? ಶುಚಿಗೊಳಿಸಬೇಕು, ಅಗತ್ಯ ಭಾಗಗಳಿಗೆ ಗ್ರೀಸ್ ಅಥವಾ ಎಣ್ಣೆ ಹಾಕಬೇಕು,ಅದು ಉತ್ತಮವಾಗಿ
ಕಾರ್ಯನಿರ್ವಹಿಸಲು ಅಗತ್ಯವಾದ ನಿರ್ವಹಣೆ ಮಾಡಬೇಕು. ಬದಲಿಗೆ ಅದಾಗಲೇ ಶುಚಿಗೊಳಿಸಿದ್ದ ಯಂತ್ರದಮೇಲೆ
ಪೂಜೆ ಮಾಡುವವರು ನೀರು ಚಿಮುಕಿಸಿದಾಗ ನೀರು ತಾಗಬಾರದ ವಿದ್ಯುತ್ ಭಾಗಗಳಿಗೆ ನೀರು ಬಿದ್ದಾಗ ಯಂತ್ರಕ್ಕೆ
ತೊಂದರೆಯೂ ಆಗಬಹುದು. ಆ ಯಂತ್ರವಾದರೋ ಕುಂಕುಮ ಅರಿಶಿನದ
ಪಟ್ಟೆಯನ್ನು ಕೇಳುತ್ತದೆಯೇ? ಕುಂಬಳಕಾಯಿ ಬಲಿ ಕೇಳುತ್ತದೆಯೇ? ಇದನ್ನೇ ಅಂಧಕಾರ ಎನ್ನಲಡ್ಡಿಯಿಲ್ಲ.
ನಾವು ಮಾಡುವ ಪೂಜಾವಿಧಿಗಳಿಗೂ ಸರಿಯಾದ ಅರ್ಥ ಇರಬೇಕಲ್ಲವೇ? ಇದು ಒಂದು ಉಧಾಹರಣೆಯಷ್ಟೆ. ಒಟ್ಟಿನಲ್ಲಿ ಅವೈಜ್ಞಾನಿಕ ಯಾವುದೇ ಆಚರಣೆಯನ್ನು ವೇದವು ವಿರೋಧಿಸುತ್ತದೆ.
ಅಷ್ಟೇ
ಅಲ್ಲ ಅಂಧಕಾರದಿಂದ ಸರಿದಮೇಲೆ ಮುಂದೇನು?..ಈ ಪಶ್ನೆಗೆ ವೇದವು ಹೇಳುತ್ತದೆ…
“ಜ್ಯೋತಿರ್ವೃಣೀತ ತಮಸೋ ವಿಜಾನನ್”
[ಋಗ್ವೇದ
3-39-7]
“ಅಂಧಕಾರದಿಂದ ದೂರಸರಿದು ಜ್ಯೊತಿಯನ್ನು ತುಂಬಿಕೊಳ್ಳಬೇಕು” ಎಂದು ವೇದವು ಕರೆಕೊಡುತ್ತದೆ. ಕತ್ತಲೆ ಹೋದಮೇಲೆ
ಬೆಳಕು ತಾನೆ ಬರಬೇಕು. ನಿಮ್ಮ ಜೀವನವನ್ನು ಉನ್ನತಿಗೆತ್ತಬಲ್ಲ ದಿವ್ಯ ಜ್ಯೋತಿಯನ್ನು ಅಂದರೆ ಜ್ಞಾನವನ್ನು ತುಂಬಿಕೊಳ್ಳಬೇಕೆಂದು
ವೇದವು ಸ್ಪಷ್ಟ ಪಡಿಸುತ್ತದೆ. ಅಂದರೆ ಒಂದು ಆಚರಣೆಯನ್ನು ಮಾಡುವಾಗ ಅದು ನಮ್ಮನ್ನು ಸತ್ಯಪಥದಲ್ಲಿ
ಕೊಂಡೊಯ್ಯುತ್ತದೋ, ಸಮಾಜದಹಿತವು ಅದರಲ್ಲಿದೆಯೇ? ವೈಜ್ಞಾನಿಕವಾಗಿ ಅದರಿಂದ ಜೀವನಕ್ಕೆ ಲಾಭವಿದೆಯೋ ಅಥವಾ ಅಂಧಕಾರದಲ್ಲಿ ನಮ್ಮನ್ನು ಮುಳುಗಿಸುತ್ತದೋ
,ಹೀಗೆ ಆಚರಣೆಯ ಎಲ್ಲಾ ಮಗ್ಗಲುಗಳನ್ನೂ ವಿವೇಚಿಸಿ ಆಚರಿಸುವುದು ಸೂಕ್ತವೆಂದು ವೇದವು ಸಾರುತ್ತದೆ.
ಮನುಷ್ಯನ ಸುಖಕರವಾದ, ನೆಮ್ಮದಿಯ ಜೀವನಕ್ಕೆ ಅಗತ್ಯವಾದ ವೇದದಲ್ಲಿನ
ಸೂತ್ರಗಳ ಬಗೆಗೆ ಮುಂದಿನ ಹಲವು ಮಂತ್ರಗಳಲ್ಲಿ ಚಿಂತನೆ ನಡೆಸೋಣ.
No comments:
Post a Comment