ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday 22 May 2013

ಕುಸುಮ-4


“ಎಲ್ಲರಿಗಾಗಿ ವೇದ”
25.11.2012

ಕುಸುಮ-4
ಇಂದು ಒಂದು     ಮಂತ್ರದ ಬಗ್ಗೆ ತಿಳಿಯೋಣ…
[ಋಗ್ವೇದ-7-33-7]
“ಆರ್ಯಾ ಜ್ಯೋತಿರಗ್ರಾ:”
ಎಷ್ಟು ಸರಳ! ಆದರೆ ಅದೆಷ್ಟು ಅರ್ಥವ್ಯಾಪ್ತಿಯನ್ನು ಹೊಂದಿರುವ ಮಂತ್ರ!!
“ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವರು ಆರ್ಯರು”
ಆರ್ಯ ..ಎಂದಾಕ್ಷಣ, ಆರ್ಯರು ಈ ದೇಶದ ಮೂಲ ನಿವಾಸಿಗಳಲ್ಲ,ಅವರು ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳ ವಿರುದ್ಧ ಹೋರಾಡಿ ತಮ್ಮ ಅಸ್ಥಿತ್ವವನ್ನು ಭಾರತದಲ್ಲಿ ಉಳಿಸಿಕೊಂಡರು…ಹೀಗೆಲ್ಲಾ ವೇದಕ್ಕೆ ವಿರುದ್ಧವಾದ ಪ್ರಚಾರ ನಡೆದಿದೆ. ಆದರೆ ಯಾರು ಆರ್ಯರು? ಎಂಬ ಬಗ್ಗೆ ಈ ಒಂದು ಚಿಕ್ಕ ಮಂತ್ರ  ಅದೆಷ್ಟು ಸೊಗಸಾಗಿ ಹೇಳಿದೆ!
ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವರು ಆರ್ಯರು…ಅಂದರೆ ದೀಪ ಹಿಡಿದುಕೊಂಡು ಮುಂದೆ  ಹೆಜ್ಜೆ ಹಾಕುವುದೇ? ಹೌದು…ಎಂತಹ ದೀಪವೆಂಬುದನ್ನು ಮಾತ್ರ ತಿಳಿದಿರಬೇಕು. “ಜ್ಞಾನದ ದಿವ್ಯ ಜ್ಯೋತಿಯನ್ನು ಹಿಡಿಕೊಂಡು  ಮುಂದೆ ಅಡಿ ಇಡುವವನು ಆರ್ಯ.”  ಇಲ್ಲಿ ಪ್ರಥಮವಾಗಿ ಆರ್ಯರೆಂದರೆ ಎಲ್ಲಿಂದಲೋ ಬಂದವರಲ್ಲಾ, ಎಂಬುದನ್ನು ಮೊದಲು ಮನಗಂಡು ಯಾರನ್ನು ಆರ್ಯ ಎನ್ನುವರು? ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. “ಜ್ಞಾನದ ದೀಪವನ್ನು ಹಿಡಿದುಕೊಂಡು   ಮುಂದೆ ಅಡಿ ಇಡುವವನು ಆರ್ಯ” ಎನ್ನುತ್ತದೆ ಋಗ್ವೇದದ ಈ ಮಂತ್ರ. ಅಂದರೆ ಅವನು ಜ್ಞಾನವಂತನಾಗಿರಬೇಕು.ಇಂದು ಪ್ರಚಲಿತವಾಗಿರುವ ಜಾತಿಯಬಗ್ಗೆ ಉಲ್ಲೇಖ ಬರುವುದಿಲ್ಲ.  ಇಲ್ಲಿ ಅವನ ಜ್ಞಾನ ಸಂಪತ್ತು ಮಾತ್ರ ಗಣನೆಗೆ ಬರುತ್ತದೆ. ಅವನ ಹುಟ್ಟು ಯಾರ ಹೊಟ್ಟೆಯಲ್ಲಾಗಿದ್ದರೇನು? ಅವನು ಜ್ಞಾನವಂತನಾಗಿರಬೇಕಷ್ಟೆ. ಅವನನ್ನು ಬ್ರಾಹ್ಮಣವರ್ಣಕ್ಕೆ ಸೇರುತ್ತಾನೆಂದು ಕೂಡ ವೇದವು ಸಾರುತ್ತದೆ.[ಇಂದಿನ ಜಾತಿಯಲ್ಲ.ವರ್ಣದ ಬಗ್ಗೆ ಮುಂದೆ ನೋಡೋಣ]
ಹಾಗಾದರೆ ಆರ್ಯನೊಬ್ಬ  ಎಷ್ಟು ಎಚ್ಚರದಿಂದ ಹೆಜ್ಜೆ ಇಡಬೇಕೆಂಬ ಬಗ್ಗೆ ನೋಡೋಣ. ಅವನು ಮುಂದೆ ಅಡಿ ಇಡುವಾಗ ತಪ್ಪು ಹೆಜ್ಜೆ ಇಡುವಂತಿಲ್ಲ. ಕಾರಣ ಅವನನ್ನು ಅನುಸರಿಸಲು ನೂರಾರು ಜನ ಕಾದಿದ್ದಾರೆ. ಅವನು ಸತ್ಯ-ಅಸತ್ಯ ಮಾರ್ಗದ ಭೇದವನ್ನು ಚೆನ್ನಾಗಿ ಅರಿತವನಾಗಿರಬೇಕು. ಯಾವುದರಲ್ಲಿಯೂ ಅಂಧಾನುಕರಣೆ ಮಾಡುವಂತಿಲ್ಲ. ಅವನು ಇಡುವ ಹೆಜ್ಜೆ ಸತ್ಯವೇ? ಹಿತವೇ? ಎಂದು  ಪರಿಶೀಲಿಸಿ    ಹೆಜ್ಜೆ ಇಡಬೇಕು. ಹೀಗೆ ವೇದದ ಒಂದೊಂದು ಚಿಕ್ಕ ಮಂತ್ರಗಳನ್ನು ಬಿಡಿಸಿ ನೋಡಿದಾಗ ಅದರ ವಿಶಾಲತೆಯ ಅರಿವಾಗುತ್ತದೆ.

No comments:

Post a Comment