ಮನುಷ್ಯನು ಯಾವ ಜಾತಿಗಾದರೂ ಸೇರಿರಲಿ,ಯಾವ ಮತಕ್ಕಾದರೂ ಸೇರಿರಲಿ, ಯಾವ ಧರ್ಮಕ್ಕಾದರೂ ಸೇರಿರಲಿ, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಆರಾಧಿಸದೆ ಇರಲು ಅವನಿಗೆ ಸಾಧ್ಯವಿಲ್ಲ. ದೇವರಿಲ್ಲ ಎನ್ನುವನಿಗೂ ಕೂಡ ತನ್ನ ಊಹೆಗರಿಯದ ಶಕ್ತಿಯೊಂದು ಜಗತ್ತನ್ನು ನಿಯಂತ್ರಿಸುತ್ತಿದೆ, ಎಂಬ ಅರಿವು ಆಗ್ಗಾಗೆ ಆಗುತ್ತಲೇ ಇರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂದರೂ ಕೂಡ ಹಲವು ವೇಳೆ ವೈದ್ಯರೂ ಕೂಡ ತಾನು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ, ಇನ್ನು ದೈವೇಚ್ಛೆ! ಎನ್ನುವ ಮಾತು ಕೇಳಿದ್ದೇವೆ.
ಹೌದು, ಭಗವಂತನ ಅಸ್ತಿತ್ವವನ್ನು ನಂಬದೇ ಇರುವವರೂ ಕೂಡ ತನ್ನ ಊಹೆಗೂ ಮೀರಿದ ಶಕ್ತಿಯೊಂದಿದೆ ಎಂದು ನಂಬಲೇ ಬೇಕು.ಅದನ್ನು ಅವನು ಏನೆಂದಾದರೂ ಕರೆದುಕೊಳ್ಳಲಿ. ಹಗಲು-ರಾತ್ರಿ ಎಂಬುದು ಒಮ್ಮೆಯೂ ವೆತ್ಯಾಸವಾಗಲೇ ಇಲ್ಲವಲ್ಲಾ! ಯಾರು ಈ ವ್ಯವಸ್ಥೆ ಮಾಡಿದವರು? ಎಂದಾಗ ಕೆಲವರು ಅದು ಪ್ರಕೃತಿ ಸಹಜ ವ್ಯವಸ್ಥೆ ಎಂದು ಬಿಡುತ್ತಾರೆ. ಸರಿ, ಹಾಗೆಂದರೇನು? ಅದರ ನಿಯಂತ್ರಕರಾರು? ಈ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದರೂ ದೇವರನ್ನು ನಂಬುವುದಿಲ್ಲವೆಂದು ವಾದಿಸುವವರಿದ್ದಾರೆ.ಇರಲಿ. ನಾಸ್ತಿಕವಾದ ಬೆಳೆಯಲು ಹಲವು ಭಾರಿ ಆಸ್ತಿಕರ ವಿಚಿತ್ರ ನಡವಳಿಕೆಯೂ ಕಾರಣ. ಈ ಲೇಖನದ ಉದ್ಧೇಶ ಇದಲ್ಲ.
ದೇವರನ್ನು ನಂಬುವವರು ನಿತ್ಯವೂ ದೇವರ ಆರಾಧನೆ ಮಾಡುತ್ತೇವೆ. ದೇವರಿಗೆ ನೈವೇದ್ಯ ಮಾಡುತ್ತೇವೆ. ಆ ಭಗವಂತನಿಗೆ ಅರ್ಪಿಸಿದೆವೆಂಬ ಭಾವದಿಂದ ಪ್ರಸಾದ ರೂಪದಲ್ಲಿ ಆ ನೈವೇದ್ಯವನ್ನು ನಾವೇ ಸೇವಿಸುತ್ತೇವೆ. ಇಂತಾ ಭಕ್ತಿಭಾವ ಬೇಕು.ಇರಲಿ. ಆದರೆ ನಾವು ಯಾವ ಯಾವ ರೀತಿಯಲ್ಲಿ ಭಗವಂತನನ್ನು ಆರಾಧಿಸಿದರೂ ಅವನನ್ನು ಕಲ್ಪಿಸಿಕೊಳ್ಳಬಹುದೇ ಹೊರತೂ ನೋಡಲು ಸಾಧ್ಯವಿಲ್ಲ. ಅವನು ಸರ್ವವ್ಯಾಪಿಯಾದ್ದರಿಂದ ನಮ್ಮ ಒಳಗೇ ಇರುವ ಆ ಭಗವಂತನೇ ನಮಗೆ ಬಲು ಹತ್ತಿರದವನು.
ಇನ್ನು ಅವನನ್ನು ನಮ್ಮ ಹೊರಗೆ ಕಾಣಬೇಕೆಂದರೆ ಚೇತನರೂಪದಲ್ಲಿರುವ ತಂದೆ-ತಾಯಿಯರಲ್ಲಿ,ಗುರುಗಳಲ್ಲಿ ಕಾಣಬಹುದು. ಗೋಮಾತಾ ಪ್ರತ್ಯಕ್ಷ ದೇವತಾ ಎನ್ನುತ್ತಾರೆ. ನಮಗೆ ಜನ್ಮಕೊಟ್ಟು ಸಲಹಿದ ತಂದೆತಾಯಿ, ವಿದ್ಯೆ ಕೊಟ್ಟ ಗುರುಗಳು, ನಮ್ಮ ಜೀವನಪೂರ್ಣ ಹಾಲು ಕೊಟ್ಟು ಸಲಹಿದ ಗೋಮಾತೆ ನಮಗೆ ಪ್ರತ್ಯಕ್ಷ ದೇವತೆಗಳು. ತಂದೆ,ತಾಯಿ, ಗುರು ಮತ್ತು ಗೋಮಾತೆಯ ಸೇವೆಯನ್ನು ಮಾಡುವುದೇ ಭಗವಂತನ ಪೂಜೆ.
ಪಂಚ ಭೂತಗಳಿಂದ ಈ ಶರೀರವು ಆಗಿದ್ದು ಜಗತ್ತೂ ಕೂಡ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಈ ಪಂಚಭೂತಗಳಾದ ನೀರು,ಗಾಳಿ,ಭೂಮಿ,ಆಕಾಶ ಮತ್ತು ಅಗ್ನಿ-ಇವುಗಳೂ ದೇವತೇ ಗಳೆ ಆಗಿವೆ.
ನಮ್ಮ ಪೂರ್ವಜರಾದ ಋಷಿಮುನಿಗಳು ನಮ್ಮಂತೆ ವಿಗ್ರಹವನ್ನು ಆರಾಧಿಸಲಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸಿದರು. ಸೂರ್ಯನನ್ನು, ಅಗ್ನಿಯನ್ನು ಆರಾಧಿಸಿದರು. ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆ, ಪ್ರತ್ಯಕ್ಷ ಅಗ್ನಿಯಲ್ಲಿ ಹೋಮವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸಿ ಅಗ್ನಿದೇವತೆಯು ಸ್ವೀಕರಿಸುವುದನ್ನು ಕಂಡರು.
ನಾವು ಬಾಯಿ ಮೂಲಕ ಸ್ವೀಕರಿಸಿದ ಆಹಾರವು ನಮ್ಮ ಜೀರ್ಣಕೋಶಗಳಲ್ಲಿ ಜೀರ್ಣವಾಗಿ ರಸವಾಗಿ ಪರಿವರ್ತಿತವಾಗಿ ರಕ್ತದ ಮೂಲಕ ಶರೀರದ ಅಂಗಾಂಗಗಳಿಗೆಲ್ಲಾ ತಲುಪುವುದಲ್ಲವೇ ಅದೇ ರೀತಿಯಲ್ಲಿ ಯಜ್ಞದಲ್ಲಿ ಕ್ರಿಯೆ ನಡೆಯುತ್ತದೆಂದರೆ ನಿಮಗೆ ಅಚ್ಚರಿಯಾಗಬಹುದು.
ಯಜ್ಞದಲ್ಲಿ ಅರ್ಪಿಸಿದ ಹವಿಸ್ಸು ಸೂಕ್ಷ್ಮಾಣುಗಳಾಗಿ ಪರಿವರ್ತಿತವಾಗಿ ಮೊದಲು ಗಾಳಿಯಲ್ಲಿ ಸೇರಿ ನಮಗೆ ಪ್ರಾಣವಾಯುವಿಗೆ ಕಾರಣವಾಗುವುದು. ಅಷ್ಟೇ ಅಲ್ಲ ನಂತರ ಮೇಘಮಂಡಲವನ್ನು ಸೇರಿ ಅದರಲ್ಲಿನ ಜಲಕ್ಕೆ ಸೇರುವುದು. ಮಳೆಯೊಡನೆ ಮತ್ತೆ ಭೂಮಿ ತಲುಪಿ ಸಸ್ಯ ಸಂಮೃದ್ಧಿಗೆ ಕಾರಣವಾಗುವುದು. ಆದುದರಿಂದಲೇ ನಮ್ಮ ಋಷಿಮುನಿಗಳು ಅಗ್ನಿರ್ವೈದೇವಾನಾಂ ಮುಖಮ್ ಎಂದರು. ಅಂದರೆ ಅಗ್ನಿಯು ದೇವತೆಗಳಿಗೆ ಬಾಯಿ ಎಂದು ಎಂದು ಪರಿಶೋಧಿಸಿ ತಿಳಿದುಕೊಂಡರು. ಒಂದು ವಿಚಾರ ಗೊತ್ತಿರಬೇಕು. ಯಜ್ಞದಲ್ಲಿ ಔಷಧೀಯ ಗುಣಗುಳುಳ್ಳ ಹವಿಸ್ಸನ್ನು ಅರ್ಪಿಸಿದಾಗ ಮಾತ್ರವೇ ವಾಯು ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ಅರಳೀ ಸಮಿತ್ತು ಮತ್ತು ಹಸುವಿನತುಪ್ಪದ ಜೊತೆಗೆ ಹಿಮಾಲದಿಂದ ತರಿಸಿರುವ ಗಿಡಮೂಲಿಕೆಗಳ ಪುಡಿಯನ್ನು ಮಾತ್ರವೇ ವೇದಭಾರತಿಯು ನಿತ್ಯವೂ ನಡೆಸುವ ಅಗ್ನಿಹೋತ್ರದಲ್ಲಿ ಉಪಯೋಗಿಸುತ್ತೇವೆ.
ಆದ್ದರಿಂದ ಇಷ್ಟು ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಿಯೇ ನಮ್ಮ ಪೂರ್ವಜರು ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಎರಡು ಹೊತ್ತು ಅಗ್ನಿಹೋತ್ರವನ್ನು ಮಾಡುತ್ತಾ ಆರೋಗ್ಯಪೂರ್ಣ ಬದುಕು ನಡೆಸಿದರು. ಮಧ್ಯ ಕಾಲದಲ್ಲಿ ಅಗ್ನಿಹೋತ್ರವನ್ನು ಕೆಲವರು ಮಾತ್ರ ಮುಂದುವರೆಸಿದರೆ ಜನಸಾಮನ್ಯರಿಂದ ಮರೆಯಾಗಿರುವುದನ್ನು ಕಾಣುತ್ತೇವೆ. ಕಾರಣ ಏನಾದರೂ ಇರಲಿ. ಆದರೆ ಇಂದಿನ ಹಲವಾರು ಸಾಮಾಜಿಕ- ಪ್ರಾಕೃತಿಕ ಸಮಸ್ಯೆಗಳನ್ನು ನೋಡಿದಾಗ ಇವುಗಳ ಪರಿಹಾರಕ್ಕೆ ಅಗ್ನಿಹೋತ್ರವು ದೊಡ್ದ ಪ್ರಮಾಣದ ಕೊಡುಗೆ ನೀಡಬಲ್ಲದು. ಅದರ ಅಧ್ಯಯನ ಮತ್ತು ಪ್ರಯೋಗಗಳು ಸಾಕಷ್ಟು ನಡೆದು ಪಾಶ್ಚಿಮಾತ್ಯರೂ ಸಹ ಅಗ್ನಿಹೋತ್ರದ ಪ್ರಯೋಜನ ಪಡೆಯುತ್ತಿದ್ದಾರೆ.
ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸಿದಾಗ ಪ್ರಕೃತಿಯ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆಂಬುದನ್ನು ಒಪ್ಪಿದರೂ ಈ ಮಂತ್ರಗಳೇಕೆ? ಹಾಗೆಯೇ ಹವಿಸ್ಸನ್ನು ಯಜ್ಞಕ್ಕೆ ಹಾಕಿದರೆ ಆಗದೇ ಎಂದು ಪ್ರಶ್ನಿಸುವವರಿದ್ದಾರೆ. ಅಗ್ನಿಹೋತ್ರದ ಆರಂಭದ ಕೆಲವು ಮಂತ್ರಗಳ ಅರ್ಥವನ್ನು ತಿಳಿದರೆ ಅದರ ಮಹತ್ವ ನಮಗೆ ಅರ್ಥವಾಗುತ್ತದೆ. ಅಗ್ನಿಹೋತ್ರದ ಬಾಹ್ಯ ಪರಿಣಾಮಗಳು ವಾಯುಮಂಡಲವನ್ನು ಶುದ್ಧಿಮಾಡಿದರೆ ಅಗ್ನಿಹೋತ್ರದಲ್ಲಿ ಹೇಳುವ ಮಂತ್ರಗಳು ನಮ್ಮ ಆಂತರ್ಯವನ್ನು ಶುದ್ಧಿಮಾಡಲು ನೆರವಾಗುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿಚಾರ ಮಾಡೋಣ.
ಆರಂಭದಲ್ಲಿ ಆಚಮನ ಮಾಡುವಾಗ ಭಗವಂತನನ್ನು ಸ್ಮರಿಸುತ್ತಾ ತೈತ್ತರೀಯ ಅರಣ್ಯಕ ಮಂತ್ರವನ್ನು ಹೇಳುತ್ತೇವೆ.
ಓಂ ಅಮೃತೋಪಸ್ತರಣಮಸಿ ಸ್ವಾಹಾ
ಓಂ ಅಮ್ರುತಾಮಪಿಧಾನಮಸಿ ಸ್ವಾಹಾ
ಓಂ ಸತ್ಯಂ ಯಶಃ ಶ್ರೀರ್ಮಯೀ ಶ್ರೀಃ ಶ್ರಯತಾಂ ಸ್ವಾಹಾ
ಹೇ ಪ್ರಭೂ ,ನೀನು ನಮಗೆ ಆಧಾರವಾಗಿದ್ದೀಯೇ,ನೀನು ಎಲ್ಲೆಲ್ಲಿಯೂ ಆವರಿಸಿದ್ದೀಯೆ, ನನ್ನಲ್ಲಿ ಸತ್ಯವೂ, ಯಶವೂ, ಸೌಂದರ್ಯವೂ, ಸಂಪತ್ತೂ, ನೆಲೆಗೊಳ್ಳಲಿ ಎಂಬುದು ಈ ಮಂತ್ರಗಳ ಅರ್ಥ.
ನಂತರ ನಮ್ಮ ಅಂಗಾಂಗಗಳನ್ನು ಸ್ಪರ್ಶಿಸುತ್ತಾ ಈ ಕೆಳಗಿನ ಮಂತ್ರಗಳನ್ನು ಹೇಳುತ್ತೇವೆ
ಓಂ ವಾಂಙ್ಮ ಆಸ್ಯೇಸ್ತು [ ನನ್ನ ನಾಲಿಗೆಯಲ್ಲಿ ವಾಕ್‌ಶಕ್ತಿ ಸ್ಥಿರವಾಗಿರಲಿ]
ಓಂ ನಸೋರ್ಮೇ ಪ್ರಾಣೋಸ್ತು [ನನ್ನ ಮೂಗಿನಲ್ಲಿ ಪ್ರಾಣಶಕ್ತಿ ಇರಲಿ]
ಓಂ ಅಕ್ಷ್ಣೋರ್ಮೇ ಚಕ್ಷುರಸ್ತು [ನನ್ನ ಕಣ್ಣುಗಳಲ್ಲಿ ದರ್ಶನಶಕ್ತಿ ಇರಲಿ]
ಓಂ ಕರ್ಣಯೋರ್ಮೇ ಶ್ರೋತ್ರಮಸ್ತು [ನನ್ನ ಕಿವಿಗಳಲ್ಲಿ ಶ್ರವಣ ಶಕ್ತಿ ಇರಲಿ]
ಓಂ ಬಾಹ್ವೋರ್ಮೇ ಬಲಮಸ್ತು [ನನ್ನ ಬಾಹುಗಳಲ್ಲಿ ಬಲವಿರಲಿ]
ಓಂ ಊರ್ವೋರ್ಮೇ ಓಜೋಸ್ತು [ನನ್ನ ತೊಡೆಗಳಲ್ಲಿ ಓಜಸ್ಸಿರಲಿ]
ಓಂ ಅರಿಷ್ಟಾನಿ ಮೇsಂಗಾನಿ ತನೂಸ್ತನ್ವಾ ಮೇ ಸಹಸಂತು
[ನನ್ನ ಎಲ್ಲಾ ಅಂಗಾಂಗಗಳೂ ಸಮರ್ಥವಾಗಿರಲಿ]
ಅಂಗಾಂಗ ಸ್ಪರ್ಷ ಮಾಡುತ್ತಾ ಇಷ್ಟೆಲ್ಲಾ ಹೇಳಿದ ನಂತರ ಅಗ್ನಿಹೋತ್ರದಲ್ಲಿ ಹವಿಸ್ಸನ್ನು ಅರ್ಪಿಸುವಾಗ ಇದಂ ನ ಮಮ ಅಂದರೆ ಈ ಯಜ್ಞವನ್ನು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೇನೆಂದು ಪ್ರತಿದಿನವೂ ಹೇಳುತ್ತೇವೆ. ಈ ನೆಲೆಯಲ್ಲಿ ಅಂಗಸ್ಪರ್ಷ ಮಂತ್ರಗಳನ್ನು ಅರ್ಥ ಮಾಡಿಕೊಳ್ಳೋಣ.
ಓಂ ವಾಂಙ್ಮ ಆಸ್ಯೇಸ್ತು ಎನ್ನುವ ಮಂತ್ರವನ್ನು ಹೇಳುವಾಗ ನನ್ನ ನಾಲಿಗೆಯಲ್ಲಿ ಇಂದು ಒಳ್ಳೆಯ ಮಾತುಗಳೇ ಬರಲಿ ಎಂದು ಸಂಕಲ್ಪಿಸಬೇಕು. ಅಂತೆಯೇ ಕಿವಿಯಲ್ಲಿ ಒಳ್ಳೆಯದನ್ನೇ ಕೇಳೋಣ, ಕಣ್ಣಿನಿಂದ ಒಳ್ಳೆಯದನ್ನೇ ಕಾಣೋಣ, ನಮ್ಮ ಶರೀರವು ಒಳ್ಳೆಯದನ್ನೇ ಮಾಡಲಿ ಎಂದು ಬೆಳಿಗ್ಗೆ ಒಮ್ಮೆ ಸಂಕಲ್ಪಮಾಡಿದರೆ ನಮ್ಮಿಂದ ಅಚಾತುರ್ಯ ಆಗಲಾರದಲ್ಲವೇ? ಆದ್ದರಿಂದ ಮಂತ್ರವನ್ನು ಹೇಳುತ್ತಾ ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುವುದು.
ಇಂತಹ ಒಂದು ಚಿಕ್ಕದಾದ , ಸರಳವಾದ ಅಗ್ನಿಹೋತ್ರವನ್ನು ಎಲ್ಲರೂ ಕಲಿಯೋಣ ಬನ್ನಿ. ನಿತ್ಯವೂ ಮಾಡುವ ಅಗ್ನಿಹೋತ್ರಕ್ಕೆ ಮೂರ್ನಾಲ್ಕು ಚಮಚ ಹಸುವಿನ ತುಪ್ಪ ಖರ್ಚಾಗುತ್ತದಷ್ಟೆ. ಆದರೆ ಅದರ ಲಾಭ ಅಪಾರ.
ಅಗ್ನಿಹೋತ್ರವನ್ನು ಯಾವ ಜಾತಿಭೇದ,ಲಿಂಗಭೇದ,ವಯಸ್ಸಿನ ಭೇದವಿಲ್ಲದೆ ಮಾಡಬಹುದು. ಬ್ರಹ್ಮಚಾರಿಗಳೂ ಮಾಡಬಹುದು. ದಂಪತಿಗಳು ಒಟ್ಟಾಗಿ ಕುಳಿತು ಮಾಡಬಹುದು.ಅಥವಾ ಒಬ್ಬರೇ ಮಾಡಿದರೂ ಅದರ ಫಲ ಇದ್ದೇ ಇದೆ.
ದಿನಾಂಕ ೧೦.೧೧.೨೦೧೪ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಹುಬ್ಬಳ್ಳಿಯ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ಹಾಸನದ ನೆಹರು ರಸ್ತೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.ಎಲ್ಲರೂ ಉಚಿತವಾಗಿ ಪಾಲೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಎಲ್ಲಾ ವಿವರವನ್ನೂ ಪ್ರಕಟಿಸಲಾಗಿದೆ. ಎಲ್ಲರಿಗೂ ವೇದಭಾರತಿಯು ಹೃದಯಪೂರ್ವಕ ಸ್ವಾಗತ ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೬೬೩೫೭೨೪೦೬ ಸಂಪರ್ಕಿಸಿ.